ಗಂಗಾವತಿ: ವಿಜಯನಗರ ಕಾಲುವೆಗೆ ಬಿದ್ದು ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಸಾಣಾಪೂರ-ವಿರೂಪಾಪೂರಗಡ್ಡಿ ಬಳಿ ರಾಜ್ಯ ಹೆದ್ದಾರಿ 130 ರಲ್ಲಿ ಡಿ.18ರ ಬುಧವಾರ ನಡೆದಿದೆ.
ತಾಲೂಕಿನ ಸಾನಾಪುರ ವಿರುಪಾಪುರ ಗಡಿ ಮಧ್ಯೆ ಕಳೆದ ವರ್ಷ ಪುರಾತನ ವಿಜಯನಗರ ಕಾಲುವೆ, ದುರಸ್ತಿ ಸಂದರ್ಭದಲ್ಲಿ ರಾಜ್ಯ ಹೆದ್ದಾರಿ 130 ಹೊಂದಿಕೊಂಡಂತೆ ನಿರ್ಮಿಸಿರುವ ಕಾಲುವೆಯ ಚಿಕ್ಕ ತಡೆಗೋಡೆ ತಿರುವಿನಲ್ಲಿ ಪದೇ ಪದೇ ಬೈಕ್ ಹಾಗೂ ಇತರೆ ವಾಹನಗಳ ಅಪಘಾತಗಳು ಸಂಭವಿಸಿ ಹಲವರು ಮಂದಿ ಕಾಲುವೆಯ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಡಿ. 18ರ ಬುಧವಾರ ಬೆಳ್ಳಿಗ್ಗೆ ಬೈಕ್ ಸವಾರನೊಬ್ಬ ಆಯತಪ್ಪಿ ಕಾಲುವೆಗೆ ಬಿದ್ದಿದ್ದು ಬೈಕ್ ಕಾಲುವೆ ದಂಡೆಯ ಮೇಲಿದೆ. ಸವಾರ ಬೈಕ್ ನ್ನು ಕಾಲುವೆಗೆ ಹಾರಿಸಿ ಮೃತಪಟ್ಟಿದ್ದಾರೆ.
ಇದೀಗ ಬುಧವಾರ ಬೆಳಗ್ಗೆ ಬೈಕ್ ಸವಾರ, ಗಂಗಾವತಿ ಕಡೆಯಿಂದ ಮುನಿರಾಬಾದ್ ಕಡೆ ಹೋಗುವ ಸಂದರ್ಭದಲ್ಲಿ ರಸ್ತೆಯ ಪಕ್ಕದಲ್ಲಿರುವ ವಿಜಯನಗರ ಕಾಲುವೆಯ ಗೋಡೆಗೆ ಡಿಕ್ಕಿ ಹೊಡೆದಿದ್ದಾನ. ಈ ಪರಿಣಾಮ ಸವಾರ ಕಾಲುವೆಗೆ ಬಿದ್ದಿರುವ ಘಟನೆ ಸಂಭವಿಸಿದ್ದು, ರಸ್ತೆ ಪಕ್ಕದಲ್ಲಿ ಬೈಕ್ ಅನಾಥವಾಗಿ ಬಿದ್ದಿದೆ. ಇಲ್ಲಿ ಕೆಲ ಕಾಗದ ಪತ್ರಗಳು ಬಿದ್ದಿದ್ದು, ಬೈಕ್ ಸವಾರ ಯಾರು ಎಂದು ಗುರುತು ಪತ್ತೆಯಾಗಿಲ್ಲ.
ಸ್ಥಳಕ್ಕೆ ಇದುವರೆಗೂ ಪೊಲೀಸ್ ಇಲಾಖೆ ಸೇರಿದಂತೆ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಯ ಯಾವೊಬ್ಬ ಅಧಿಕಾರಿಯು ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ ಕೊಪ್ಪಳದಿಂದ ಕಿಷ್ಕಿಂಧಾ ಅಂಜನಾದ್ರಿಗೆ ಬೈಕ್ ನಲ್ಲಿ ಗೆಳೆಯನ ಜತೆ ಬಂದಿದ್ದ ಬೈಕ್ ಸವಾರ ಕಾಲುವೆಗೆ ಬಿದ್ದು ಸಾವನ್ನಪ್ಪಿದ್ದ.