೧೩. ಹಸ್ತಾ: ಈ ನಕ್ಷತ್ರದಲ್ಲಿ ಜನಿಸಿದವನು ದಾನ ಧರ್ಮ ಕಾರ್ಯದಲ್ಲಿ ತತ್ವರನ್ನೂ ಮರ್ಯಾದೆಯಿಂದ ಬಾಳು ಸಾಗಿಸುವವನೂ, ಗುರುದೇವತಾ ಪೂಜಾದಿ ಸತ್ಕಾರ್ಯದಲ್ಲಿ ತತ್ಪರನೂ, ಸಕಲ ಸಂಪತ್ತನ್ನು ಅನುಭವಿಸುವ ಸುಖೋಪಭೋಗಿಯೂ ಆಗುವನು.
ಚರಣ ಫಲವು : ಈ ನಕ್ಷತ್ರದ ೧ ನೇ ಚರಣದಲ್ಲಿ ಜನಿಸಿದವನು ಶೀಘ್ರ ಕೋಪಿಯೂ ಬಡತನವನ್ನು ಅನುಭವಿಸುವವನೂ ಜಿಪುಣನೂ ಮೇಲಿಂದ ಮೇಲೆ ನಷ್ಟ ದುಃಖವನ್ನು ಅನುಭವಿಸುವವನೂ ಆಗಿದ್ದರೂ ಒಳ್ಳೇ ಚಟುವಟಿಕೆಯುಳ್ಳವನೂ ಬಲವಾನೂ ಆಗಿರುವನು ೨ನೇ ಚರಣದಲ್ಲಿ ಜನಿಸಿದವನು ಮಂದಬುದ್ದಿಯುಳ್ಳವನು. ಆದರೆ ವಿದ್ಯಾ- ಬುದ್ದಿಗಳನ್ನು ತಿಳಿದವನು ನಿಧಾನವಾಗಿ ಯೋಚಿಸಿ ಕಾರ್ಯ ಕೈಕೊಳ್ಳುವವನೂ ಆಗುತ್ತಾನೆ. ೩ನೇ ಚರಣದಲ್ಲಿ ಜನಿಸಿದವನು ವ್ಯವಹಾರ ಕುಶಲನೂ, ವಿದ್ಯಾಬುದ್ಧಿವಂತನೂ, ಧರ್ಮ ಕಾರ್ಯದಲ್ಲಿ ನಿರತನೂ ಸಂತೋಷ ಹೃದಯದವನೂ ಆಗುವನು. ೪ ನೇ ಚರಣದಲ್ಲಿ ಜನಿಸಿದವನು ಜಿತೇಂದ್ರಿಯನೂ, ಧರ್ಮ ಕಾರ್ಯದಲ್ಲಿ ವಿಶೇಷ ಆಸಕ್ತನೂ, ಸದಾಚಾರಿಯೂ, ಸರಕಾರದ ಆಡಳಿತದಲ್ಲಿ ವಿಶೇಷ ಮನ್ನಣೆಯನ್ನು ಹೊಂದಿದವನೂ ಆಗಿರುತ್ತಾನೆ. ಅಲ್ಲದೇ, ಶ್ರೀಮಂತನೂ ಸುಶೀಲನೂ ಆಗಿರುತ್ತಾನೆ. ಆಗಾಗ್ಗೆ ಕೋಪಿಷ್ಠನೂ ಆಗುವನು.
ಕಂಟಕಾದಿಗಳು : ಈ ಜಾತಕನು ಹುಟ್ಟಿದಂದಿನಿಂದ ೧ನೇ ವರ್ಷದಲ್ಲಿ ಜ್ವರ-ಕೆಮ್ಮುಗಳಂಥ ರೋಗದಿಂದ ಬಳಲುವನು ೨-೩-೫ ನೇ ವರ್ಷದಲ್ಲಿ ಕಳ್ಳ ಸುಳ್ಳರಿಂದ ಇಲ್ಲವೆ ವಿರೋಧಿ ಜನರಿಂದ ದೇಹಕ್ಕೆ ಪೀಡೆಯು, ೨೦ ನೇ ವಯಸ್ಸಿನಲ್ಲಿ ಕ್ರೂರ ಪಶುವಿನಿಂದ ಅಪಘಾತ-ಭಯವು. ೨೪ನೇ ವಯಸ್ಸಿನಲ್ಲಿ ನೀರಿನ ಕಂಟಕವಿದೆ. ೩೦ನೇ ವಯಸ್ಸಿನಲ್ಲಿ ವಿರೋಧಿ ಜನರಿಂದ ಇಲ್ಲವೆ ಸರಕಾರದಿಂದ ಕಿರಿಕಿರಿಯೊಂದಿಗೆ, ಮಾನಸಿಕ ತೊಂದರೆ ಹಾಗೂ ದೊಡ್ಡ ರೋಗದಿಂದ ದೇಹಕ್ಕೆ ಗಂಡಾಂತರ. ೪೪ ಸೇ ವರ್ಷದಲ್ಲಿ ದುಷ್ಟ ಜನರಿಂದ ಭಯವನ್ನುಂಟು ಮಾಡುವ ಉಪದ್ರವ ೪೮ ನೇ ವರ್ಷದಲ್ಲಿ ವಿಷಮ ಜ್ವರದಂಥ ರೋಗ ಭಯವು ೬0ನೇ ವರ್ಷದಲ್ಲಿ ಅಪಮೃತ್ಯುವಿನಂಥ ಭಯವು ೭೦ ನೇ ವಯಸ್ಸಿನಲ್ಲಿ ದೊಡ್ಡ ಕಂಟಕವಿದೆ. ಇವೆಲ್ಲವುಗಳಿಂದ ಈ ಜಾತಕನು ಪಾರಾದರೆ 88 ವರ್ಷಗಳ ಆಯುಷ್ಯವು.
ವಿಶೇಷ : ಈ ನಕ್ಷತ್ರವು ಕೋಣ ಯೋನಿ, ದೇವಗಣ, ಆದಿನಾಡಿ ಕ್ಷಿಪ್ರ ಸಂಜ್ಞೆ, ಮಂದಲೋಚನವುಳ್ಳದ್ದು ಈ ನಕ್ಷತ್ರದ ಆರಾಧ್ಯ ವೃಕ್ಷವು ಜಾಜಿ ಮಲ್ಲಿಗೆ ಗಿಡವು.
೧೪. ಚಿತ್ರಾ : ನಕ್ಷತ್ರದಲ್ಲಿ ಜನಿಸಿದವನು ವಿಚಿತ್ರ ಸ್ವಭಾವದವನೂ, ಧರ್ಮ- ನೀತಿ ನ್ಯಾಯಗಳ ಬಗ್ಗೆ ವಿಶೇಷ ತಿಳಿದವನೂ, ಮುತ್ಸದ್ದಿತನದಿಂದ ನಡೆಯುವವನಾಗಿದ್ದರೂ ವಿರೋಧಿಗಳ ಕುತಂತ್ರಗಳಿಗೆ ಆಗಾಗ್ಗೆ ಬಲಿಯಾಗುವನು. ವಿಶೇಷ ಆಡಂಬರವುಳ್ಳ ಈತನು ಒಳ್ಳೇ ಬಟ್ಟೆಗಳನ್ನು ಧರಿಸುವ ಶೋಕಿಯುಳ್ಳವನು, ಅನೇಕ ಶಾಸ್ತ್ರಗಳನ್ನು ಬಲ್ಲಿದವನೂ ಆಗಿರುತ್ತಾನೆ.
ಚರಣ ಫಲವು : ಈ ನಕ್ಷತ್ರದ ೧ ನೇ ಚರಣದಲ್ಲಿ ಜನಿಸಿದವನು ರಾಜವೈಭವವನ್ನುಹೊಂದಿ ಅನುಭವಿಸುವವನೂ, ಚಪಲಚಿತ್ತನೂ, ಧರ್ಮಪ್ರೇಮಿಯೂ, ಶೀಘ್ರಕೋಪ ವುಳ್ಳವನೂ ಅನೇಕ ಪುತ್ರರನ್ನು ಹೊಂದಿರುವವನೂ ಆಗುತ್ತಾನೆ. ೨ನೇ ಚರಣದಲ್ಲಿ ಜನಿಸಿದವನು ಬುದ್ಧಿವಂತನೂ, ಧರ್ಮಕಾರ್ಯದಲ್ಲಿ ವಿಶೇಷ ದಕ್ಷತೆಯನ್ನು ಹೊಂದು ವವನೂ, ಒಳ್ಳೇ ಮೃದು ಮಾತುಗಾರನೂ, ಜನರನ್ನು ರಂಜಿಸುವವನೂ ಆಗಿರುತ್ತಾನೆ. ಆದರೆ ಜಿಪುಣಾಗ್ರೇಸರನು ಸುಖೀ ಜೀವನ ನಡೆಸುವವನಾಗುವನು. ೩ನೇ ಚರಣದಲ್ಲಿ ಜನಿಸಿದವನು ನಿರ್ಭಿತನೂ, ವಿಜಯಶಾಲಿಯೂ, ಕೀರ್ತಿವಂತನೂ, ಹಿಡಿದ ಹಟವನ್ನು ಬಿಡದವನೂ, ಒಳ್ಳೇ ಪುತ್ರರನ್ನು ಸದ್ಗುಣಿ ಮಿತ್ರರನ್ನು ಹೊಂದಿದವನಾಗುತ್ತಾನೆ. ೪ ನೇ ಚರಣದಲ್ಲಿ ಜನಿಸಿದವನು ಒಳ್ಳೇ ದಿಟ್ಟನಾಗಿದ್ದರೂ ದರಿದ್ರನು ದುರ್ಮಾರ್ಗಿಯು. ದುಃಖಿಯು, ಕುಹಕನು ಆಗುತ್ತಾನೆ. ಸಾಹಸಿಯಾಗಿದ್ದರೂ ವಿರೋಧಿಗಳನ್ನು ಹೊಂದಿ ಕಷ್ಟಗಳನ್ನು ಅನುಭವಿಸುವನು.
ಗ್ರಂಥಾಂತರೇ : ಈ ನಕ್ಷತ್ರದ ೧-೨ ನೇ ಚರಣಗಳಲ್ಲಿ ಗಂಡು ಶಿಶು ಜನಿಸಿದರೆ ತಂದೆಗೂ, ಹೆಣ್ಣು ಶಿಶು ಜನಿಸಿದರೆ ತಾಯಿಗೂ ಪೀಡಾಕರವು ಆದ್ದರಿಂದ ತಂದೆಯು ೬ ತಿಂಗಳುಗಳ ವರೆಗೆ ಕೂಸಿನ ಮುಖ ನೋಡಬಾರದು ೬ ತಿಂಗಳುಗಳ ನಂತರ ಒಂದು ಹೊಸ ಕಂಬಳಿಯನ್ನು ಪೂಜ್ಯರಿಗೆ ದಕ್ಷಿಣೆ ಭೋಜನಾದಿಗಳೊಂದಿಗೆ ದಾನದಿಂದ ಸಂತೃಪ್ತಪಡಿಸಿ ಕೂಸಿನ ಮುಖ ನೋಡಬೇಕು. ೩. ೪ ನೇ ಚರಣಗಳಲ್ಲಿಯೂ ಗಂಡುಕೂಸು ಜನಿಸಿದರೆ ತಂದೆಗೆ ದೋಷವುಂಟೆಂದು ಕೆಲವು ಜ್ಯೋತಿಷ್ಯಗಳು ಸೂಚಿಸಿವೆ. ಅದೇನೇ ಇದ್ದರೂ, ಈ ನಕ್ಷತ್ರದಲ್ಲಿ ಗಂಡು ಕೂಸು ಜನಿಸಿದರೆ ಕಂಬಳಿಯನ್ನು ಅವಶ್ಯ ದಾನ ಮಾಡುವದು ಉತ್ತಮ.
ಕಂಟಕಾದಿಗಳು : ಈ ನಕ್ಷತ್ರದಲ್ಲಿ ಜನಿಸಿದ ಜಾತಕನಿಗೆ ೧ ನೇ ವರ್ಷದಲ್ಲಿ ಆಕಸ್ಮಿಕ ರೋಗದ ಭಯವಿದೆ ೫ ನೇ ವರ್ಷದಲ್ಲಿ ಅಶ್ವಭಯವಿದೆ. ೮ ನೇ ವರ್ಷದಲ್ಲಿ ಚತುಷ್ಪಾದ ಸಾಕು ಪ್ರಾಣಿಯಿಂದ ಕಂಟಕವುಂಟು ೧೦-೧೨ ನೇ ವರ್ಷದಲ್ಲಿ ವಾಹನ ಅಪಘಾತಗಳಿಂದ ಕಂಟಕವು. ೧೬ ರಲ್ಲಿ ಜ್ವರ ಭಯವು ೨೦ ನೇ ವರ್ಷದಲ್ಲಿ ಜಲಭಯವು. ೨೧ ನೇ ವರ್ಷದಲ್ಲಿ ಶಸ್ತ್ರ ಭಯವು ೨೫-೩೨ ನೇ ವರ್ಷದಲ್ಲಿ ಕಠಿಣ ರೋಗದ ಭಯವು ೩೦-೪೦ ನೇ ವರ್ಷದಲ್ಲಿ ಮೇಹ ರೋಗದಂತಹ ರೋಗದಿಂದ ನರಳುವಿಕೆ ೫೦ ನೇ ವರ್ಷದಲ್ಲಿ ಅಪಮೃತ್ಯು ಭಯವು, ೬೦ ನೇ ವರ್ಷದಲ್ಲಿ ಸರಕಾರದಿಂದ ಏನಕೇನ ಪ್ರಕಾರವಾಗಿ ಮಾನಸಿಕ ತೊಂದರೆಯುಂಟು. ಸರಕಾರಿ ಕೆಲಸದಿಂದಾಗಿ ಬಂಧನವಾದರೂ ಆದೀತು, ಇಲ್ಲವೆ ಬೇರೆಪ್ರಕಾರವಾಗಿ ತೊಂದರೆ ಅನುಭವಿಸುವಿಕೆ. ಈ ಎಲ್ಲ ಕಂಟಕಗಳನ್ನು ಕಳೆದರೆ ಈ ಜಾತಕನಿಗೆ ೮೪ ವರ್ಷ ಆಯುಷ್ಯವು.
ವಿಶೇಷ : ಚಿತ್ತಾ ನಕ್ಷತ್ರವು ಹುಲಿಯೋನಿ, ರಾಕ್ಷಸಗಣ, ಮಧ್ಯನಾಡಿ, ಮೃದು ಸಂಜ್ಞೆ ಮಧ್ಯಲೋಚನೆಯುಳ್ಳದ್ದು ಈ ನಕ್ಷತ್ರದ ಆರಾಧ್ಯ ವೃಕ್ಷ ಬಿಲ್ವ ಮರವು.
೧೫. ಸ್ವಾತಿ ನಕ್ಷತ್ರದಲ್ಲಿ ಜನಿಸಿದಾತನು ಒಳ್ಳೇ ಸುಂದರ ದೃಢಕಾಯಪುರುಷನೂ ರಾಜ ಸಮಾನವಾದ ಮರ್ಯಾದೆಯನ್ನು ಹೊಂದಿ, ಸುಖ-ಭೋಗ ಹೊಂದುವವನ್ನೂ ವಿಶೇಷ ಸುಂದರ ಸ್ತ್ರೀಯರನ್ನು ಪ್ರೇಮಿಸುವವನೂ, ದಯಾಳು ಹೃದಯವುಳ್ಳವನೂ ಧನ-ಧಾನ್ಯ ಸಂಪತ್ತುಗಳ ಒಡೆಯನೂ ಆಗುತ್ತಾನೆ.
ಚರಣ ಫಲವು : ಈ ನಕ್ಷತ್ರದ ೧ ನೇ ಚರಣದಲ್ಲಿ ಜನಿಸಿದವನು ಧೈರ್ಯವಂತನೂ,ಜಾಣತನದಿಂದ ವರ್ತಿಸುವವನೂ, ಗುಣವಂತನೂ, ಎಲ್ಲರಿಂದಲೂ ಮನ್ನಣೆ ಹೊಂದುವವನೂ ಆಗುತ್ತಾನೆ. ೨ ನೇ ಚರಣದಲ್ಲಿ ಜನಿಸಿದವನು ದುಷ್ಟ ನೀತಿಯಿಂದಲೇ ಬದುಕುವವನೂ, ಸುಳ್ಳು ಹೇಳುವಲ್ಲಿ ಮುಂದುವರೆದವನು, ವಂಚಕ ಬುದ್ಧಿಯೊಂದಿಗೆ ಉಪಕಾರ ಸ್ಮರಿಸದೇ ವರ್ತಿಸುವನು. ಆದರೆ ಧನವಂತನೇ ಆಗಿದ್ದು ಸುಖ ಪಡೆಯುತ್ತ ಲಿರುವನು. ೩ ನೇ ಚರಣದಲ್ಲಿ ಜನಿಸಿದವನು ಶೀಘ್ರ ಕೋಪವುಳ್ಳವನು. ಕರ್ತವ್ಯದಲ್ಲಿ ಸೋಮಾರಿಯಾಗಿದ್ದು, ಸದಾ ಚಿಂತೆಯಲ್ಲಿ ಕಾಲ ಕಳೆಯುವನು. ಈತನು ಬುದ್ಧಿಗೇಡಿಯೂ ದುಂದುಗಾರನೂ ಆಗುವನು ೪ ನೇ ಚರಣದಲ್ಲಿ ಜನಿಸಿದವನು ಗುರು-ಹಿರಿಯರಲ್ಲಿ ವಿಶೇಷ ಭಕ್ತಿಯನ್ನಿರಿಸಿದವನೂ, ಬಂಧು ಪ್ರೇಮಿಯೂ, ಮಧುರ ಮಾತುಗಳನ್ನು ಆಡುವವನೂ ಶ್ರೀಮಂತನೂ, ಜನಾನುರಾಗಿಯೂ, ಮರ್ಯಾದೆಯುಳ್ಳವನೂ ಆದರೆ, ಆಗಾಗ್ಗೆ . ಕೋಪಗೊಳ್ಳುವು ಸ್ವಭಾವವುಳ್ಳವನೂ ಆಗುತ್ತಾನೆ.
ಕಂಟಕಾದಿಗಳು : ಈ ಜಾತಕನು ಹುಟ್ಟಿದಲ್ಲಿ ನೇ ವರ್ಷದಲ್ಲಿ ಬಾಲಗ್ರಹ ಪೀಡೆಯಿಂದ ನರಳುವನು, ಇಲ್ಲವೇ ಶೀತ ಜ್ವರದಿಂದ ಬಳಲುವನು ೩-೪ ನೇ ವರ್ಷದಲ್ಲಿ ಪಶುಗಳ ಭಯವು. ಇಲ್ಲವೆ ಜ್ವರಗಳಿಂದ ಬಳಲುವಿಕೆ. ೮-೧೦ ನೇ ವರ್ಷದಲ್ಲಿ ವಿಚಿತ್ರ ರೋಗವು ‘೧೨ ನೇ ವರ್ಷದಲ್ಲಿ ಅಪಮೃತ್ಯು ಭಯವು ೧೬ ನೇ ವರ್ಷದಲ್ಲಿ ನೀರಿನ ಕಂಟಕ, ೨೦ ನೇ ವರ್ಷದಲ್ಲಿ ಗಿಡಮರಗಳ ಮೇಲಿಂದ ಬೀಳುವ ಕಂಟಕ ಇಲ್ಲವೆ ಎತ್ತರದ ಮೇಲಿಂದ ಬೀಳುವ ಭಯವು ೩೦ ನೇ ವರ್ಷದಲ್ಲಿ ಜ್ವರದಿಂದ ಬಳಲುವಿಕೆ, ೪೫ ನೇ ವರ್ಷದಲ್ಲಿ ಅಪಘಾತ ಭಯ ಇಲ್ಲವೆ ಅಪಮೃತ್ಯು ಭಯವು. ೫೦ ನೇ ವರ್ಷದಲ್ಲಿ ಪುತ್ರಾದಿಗಳ ಉಪಟಳ ಜಾಸ್ತಿಯಾಗಿ ಹೃದಯ ಬೇನೆ ಕಾಣಿಸಿಕೊಂಡೀತು. ೫೬ ನೇ ವರ್ಷದಲ್ಲಿ ಜ್ವರ ಸಂಬಂಧಿ’ ಪ್ರಾಣಕ್ಕೆ ಭಯವು. ೬೧ ನೇ ವರ್ಷದಲ್ಲಿ ಸ್ತ್ರೀಮೂಲಕ ಸಂಕಟಪ್ರದ ಕಂಟಕ ಭಯವಿದೆ. ಇವೆಲ್ಲವುಗಳಿಂದ ಪಾರಾದರೆ ಈ ಜಾತಕನಿಗೆ ೮೦ ರಿಂದ ೯೦ ವರ್ಷಗಳವರೆಗೆ ಆಯುಷ್ಯವು
ವಿಶೇಷ : ಈ ನಕ್ಷತ್ರವ ಮಹಿಷಿಯೋನಿ, ದೇವಗಣ, ಅಂತ್ಯನಾಡಿ, ಚರ ಸಂಜ್ಞೆ, ಸುಲೋಚನವುಳ್ಳದ್ದು ಈ ನಕ್ಷತ್ರದ ಆರಾಧ್ಯ ವೃಕ್ಷ ಆರೀ ಗಿಡ.