ಮನೆ ಸುದ್ದಿ ಜಾಲ ಲಾಂಗ್‌ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ: ಆಟೋ ಚಾಲಕನ ಬಂಧನ!

ಲಾಂಗ್‌ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ: ಆಟೋ ಚಾಲಕನ ಬಂಧನ!

0

ಚಿಕ್ಕಬಳ್ಳಾಪುರ: ಲಾಂಗ್ ಮೂಲಕ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಿದ ಆಟೋ ಚಾಲಕನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ವೈಚಕೂರಹಳ್ಳಿ ಗ್ರಾಮದ ನಿವಾಸಿ ಅನಿಲ್ ಕುಮಾರ್ ಎಂಬ ಆಟೋ ಚಾಲಕನು ತನ್ನ ಹುಟ್ಟುಹಬ್ಬದಂದು ವಿಶಿಷ್ಟ ಹಾಗೂ ಅಪಾಯಕಾರಿಯಾಗಿ ಕೇಕ್ ಕಟ್ ಮಾಡಿ ಹಬ್ಬವನ್ನು ಆಚರಿಸಿದ್ದ. ವಿಶೇಷವೆಂದರೆ, ಈತ ತನ್ನ ಹೆಸರನ್ನು “ಕಿಂಗ್” ಎಂದು ಹಾಕಿಸಿಕೊಂಡು, ಕೇಕ್ ಕಟ್ ಮಾಡಲು ಸಾಮಾನ್ಯವಾದ ಚಾಕು ಅಥವಾ ಕತ್ತಿಯನ್ನು ಬಳಸದ ಹೊರತು, ಮಾರಕಾಸ್ತ್ರವಾದ ಲಾಂಗ್ ಅನ್ನು ಬಳಸಿದ್ದ. ಈ ಅಪಾಯಕಾರಿ ಕ್ರಿಯೆಯನ್ನು ವಿಡಿಯೋ ರೂಪದಲ್ಲಿ ಚಿತ್ರೀಕರಿಸಿ, ನಂತರ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ.

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಗೌರಿಬಿದನೂರು ಗ್ರಾಮಾಂತರ ಠಾಣೆಯ ಪೊಲೀಸರು ಗಂಭೀರವಾಗಿ ಪರಿಗಣಿಸಿ ಅನಿಲ್ ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು, ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಈ ಪ್ರಕರಣದ ವಿಚಾರಣೆಯನ್ನು ಮುಂದುವರೆಸಿದ್ದು, ಈ ತರಹದ ಘಟನೆಗಳು ಪುನರಾವೃತ್ತಿಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕವಾಗಿ ಮಾರಕಾಸ್ತ್ರ ಪ್ರದರ್ಶನ, ಅದರ ಬಳಕೆಯ ಮೂಲಕ ಹಬ್ಬ ಅಥವಾ ಕಾರ್ಯಕ್ರಮ ಆಚರಣೆ, ಕಾನೂನಿಗೆ ವಿರುದ್ಧವಷ್ಟೇ ಅಲ್ಲದೇ ಸಮಾಜದ ಶಾಂತಿ ಮತ್ತು ಭದ್ರತೆಗೆ ಅಪಾಯವನ್ನೂಂಟುಮಾಡುತ್ತದೆ.