ಮನೆ ಕಾನೂನು ಬಿಟ್ ಕಾಯಿನ್ ಹಗರಣ: ಆರೋಪಿ ಡಿವೈಎಸ್‌ಪಿ ಶ್ರೀಧರ್​​ ಬಂಧಿಸದಂತೆ ಹೈಕೋರ್ಟ್ ಆದೇಶ

ಬಿಟ್ ಕಾಯಿನ್ ಹಗರಣ: ಆರೋಪಿ ಡಿವೈಎಸ್‌ಪಿ ಶ್ರೀಧರ್​​ ಬಂಧಿಸದಂತೆ ಹೈಕೋರ್ಟ್ ಆದೇಶ

0

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಬಿಟ್ ಕಾಯಿನ್​ಗಳ ವರ್ಗಾವಣೆ ಮತ್ತು ಪಾಸ್​ವರ್ಡ್​​​ ಬದಲಾವಣೆ ಮಾಡಿದ ಆರೋಪಿ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್​ಪಿ) ಶ್ರೀಧರ್ ಕೆ. ಪೂಜಾರ್ ಅವರನ್ನು ಮುಂದಿನ ವಿಚಾರಣೆವರೆಗೂ ಬಂಧಿಸದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

ಪೊಲೀಸ್ ಅಧಿಕಾರಿ ಶ್ರೀಧರ್ ಕೆ. ಪೂಜಾರ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಸರ್ಕಾರ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಬೇಕು. ಅಲ್ಲಿಯವರೆಗೆ ಪೂಜಾರ್ ಅವರನ್ನು ಬಂಧಿಸುವ ಪ್ರಯತ್ನಕ್ಕೆ ಮುಂದಾಗಬಾರದು ಎಂದು ತಿಳಿಸಿ ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ”ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೊಸದಾಗಿ ನಿರೀಕ್ಷಣಾ ಜಾಮೀನು ಕೋರಲಾಗಿದೆ. ಈ ಹಿಂದೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್ ಸೂಚನೆಯಂತೆ ತನಿಖಾಧಿಕಾರಿಯ ಮುಂದೆ ಪೂಜಾರ್ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಪೂಜಾರ್ ಅವರ ಮೊಬೈಲ್ ಫೋನ್, ಲ್ಯಾಪ್​ಟಾಪ್ ಮತ್ತು ಪೆನ್​ಡ್ರೈವ್ ಜಪ್ತಿ ಮಾಡಲಾಗಿದೆ. ಇದೀಗ ಪೂಜಾರ್ ಅವರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ವಿವರಿಸಿದರು.

”ಅರ್ಜಿದಾರರು, ಡಿವೈಎಸ್ಪಿ ಶ್ರೇಣಿಯ ಅಧಿಕಾರಿಯಾಗಿದ್ದು, ಹಲವು ಪ್ರಕರಣಗಳಲ್ಲಿ ತನಿಖಾಧಿಕಾರಿಯಾಗಿದ್ದಾರೆ. ಒಂದೊಮ್ಮೆ ಪೂಜಾರ್ ಬಂಧನವಾದರೆ ಪ್ರತಿವಾದಿಗಳು ಪೂಜಾರ್ ಬಂಧನದ ವಿಚಾರವನ್ನು ಪ್ರಸ್ತಾಪಿಸಬಹುದು. ಅವರ ಇಡೀ ಸೇವೆಯು ಕಳಂಕಿತವಾಗಲಿದೆ. ಒಂದೊಮ್ಮೆ ಪೂಜಾರ್ ಬಂಧನವಾದರೆ ಅವರ ಇಡೀ ವೃತ್ತಿ ಬದುಕು ನಾಶವಾಗಲಿದೆ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು.

ಸರ್ಕಾರದ ಪರ ವಕೀಲರು, ”ಪ್ರಕರಣದಲ್ಲಿ ಕೆಲವು ಪರಿಕರಗಳನ್ನು ಜಪ್ತಿ ಮಾಡಬೇಕಿದೆ. ಬಿಟ್ ಕಾಯಿನ್ ಹಗರಣದ ರೂವಾರಿ ಶ್ರೀಕಾಂತ್ ಅಲಿಯಾಸ್ ಶ್ರೀಕಿ ಭಾಗಿಯಾಗಿರುವ ಪ್ರಕರಣದಲ್ಲಿ ಆತನನ್ನು ಕೆಲವು ಲೈವ್ ಸರ್ವರ್​​ಗಳನ್ನು ಹ್ಯಾಕ್ ಮಾಡಲಾಗಿದೆ. ಅಲ್ಲಿಂದ ಬಿಟ್ ​ಕಾಯಿನ್​ಗಳನ್ನು ಕದಿಯಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಹಗರಣವಾಗಿದೆ. ಇದಕ್ಕೆ ವಿಸ್ತೃತವಾದ ಆಕ್ಷೇಪಣೆ ಸಲ್ಲಿಸಬೇಕಿದೆ. ಆದ್ದರಿಂದ ಜಾಮೀನು ನೀಡಬಾರದು” ಎಂದು ಕೋರಿದರು.

”ಅರ್ಜಿದಾರರು ತನಿಖಾಧಿಕಾರಿಯ ಮುಂದೆ ಹಾಜರಾಗಿ, ಇಡೀ ತನಿಖೆಯನ್ನು ದಾರಿ ತಪ್ಪಿಸಿದ್ದಾರೆ. ತನಿಖೆ ಹಳಿ ತಪ್ಪಿದೆ. ಅವರಿಗೆ ಮಧ್ಯಂತರ ರಕ್ಷಣೆ ನೀಡುವುದು ಸೂಕ್ತವಲ್ಲ. ವಾಟ್ಸ್​ಆ್ಯಪ್ ಸಂವಹನ ಪತ್ತೆಯಾದ ಮೇಲೆ ಶ್ರೀಧರ್ ಪೂಜಾರ್ ಮತ್ತು ಇತರ ಅಧಿಕಾರಿಗಳು ಎಸಗಿರುವ ಅಪರಾಧ ಬಹಿರಂಗವಾಗಿದೆ” ಎಂದು ವಿವರಿಸಿದರು.

ಪ್ರಕರಣದ ಹಿನ್ನೆಲೆ: ಡಾರ್ಕ್​ನೆಟ್ ಮೂಲಕ ಮಾದಕ ವಸ್ತು ಖರೀದಿಸಿದ ಆರೋಪದ ಮೇಲೆ 2020ರ ನವೆಂಬರ್ ತಿಂಗಳಲ್ಲಿ ಶ್ರೀಕಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆಗ ಸಿಸಿಬಿಯಲ್ಲಿ ಪೂಜಾರ್ ತನಿಖಾಧಿಕಾರಿಯಾಗಿದ್ದರು. ಶ್ರೀಕಿ ಬಂಧನದೊಂದಿಗೆ ಕರ್ನಾಟಕದಲ್ಲಿ ಸೈಬರ್ ಅಪರಾಧಗಳು ಬೆಳಕಿಗೆ ಬಂದಿದ್ದವು.

ಇದರಲ್ಲಿ 2019ರ ಜುಲೈ-ಆಗಸ್ಟ್ ಅವಧಿಯಲ್ಲಿ ಕರ್ನಾಟಕ ಸರ್ಕಾರದ ಇ-ಆಡಳಿತ ಘಟಕದ 11.5 ಕೋಟಿ ರೂಪಾಯಿ ದೋಚಿದ್ದ ಪ್ರಕರಣವೂ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ 10ನೇ ಆರೋಪಿಯಾದ ಶ್ರೀಕಿಯನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಬಿಟ್ ಕಾಯಿನ್ ವರ್ಗಾವಣೆ, ಪಾಸ್​ವರ್ಡ್ ಬದಲಾವಣೆ ಇತ್ಯಾದಿ ಕೃತ್ಯಕ್ಕೆ ಬಳಕೆ ಮಾಡಿದ ಆರೋಪ ಪೂಜಾರ್ ಮತ್ತಿತರರ ವಿರುದ್ಧ ಇದೆ. ಆನಂತರ, ಈ ಪ್ರಕರಣದಲ್ಲಿ ಪೂಜಾರ್ ಅವರನ್ನು ಬಂಧಿಸಲು ತೆರಳಿದ್ದಾಗ ತನಿಖಾಧಿಕಾರಿಗಳ ಮೇಲೆ ಕಾರು ಹತ್ತಿಸಲು ಮುಂದಾದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಉತ್ತಮ ಕೇಳುಗ ಮಾತ್ರ ಉತ್ತಮ ಸಂಸದೀಯ ಪಟುವಾಗಬಲ್ಲ: ಸಿದ್ದರಾಮಯ್ಯ
ಮುಂದಿನ ಲೇಖನರೆಪೋ ದರ ಶೇ. 6.5ರಲ್ಲಿ ಮುಂದುವರಿಕೆ: ಆರ್ ಬಿಐ