ಮನೆ ಆರೋಗ್ಯ ಆರೋಗ್ಯಕ್ಕೆ ಒಳ್ಳೆಯದು ಹಾಗಲಕಾಯಿ

ಆರೋಗ್ಯಕ್ಕೆ ಒಳ್ಳೆಯದು ಹಾಗಲಕಾಯಿ

0

ಹಾಗಲಕಾಯಿ ಕಹಿಯಾದರೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸಮೃದ್ಧವಾದ ವಿಟಮಿನ್‌ ಎ, ಸಿ, ಕಬ್ಬಿಣಾಂಶ, ಮ್ಯಾಗ್ನಿಶೀಯಂ, ಆಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿರುವ ಹಾಗಲಕಾಯಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.

​ಕಫ ಮತ್ತು ಪಿತ್ತ ನಿವಾರಣೆ

ಇದು ದೇಹದಲ್ಲಿನ ಕಫ ಮತ್ತು ಪಿತ್ತ ನಿವಾರಣೆಗೆ ಒಳ್ಳೆಯದು. ಹೀಗಾಗಿ ಅಡುಗೆಯಲ್ಲಿ ಹಾಗಲಕಾಯಿಯನ್ನು ಬಳಸುವುದು ಉತ್ತಮ. ಅನೇಕರು ಹಾಗಲಕಾಯಿ ದೇಹದ ಉಷ್ಣತೆಯನ್ನು ಹೆಚ್ಚು ಮಾಡುತ್ತದೆ ಎನ್ನುತ್ತಾರೆ. ಡಾ. ಶರದ್‌ ಹೇಳುವ ಪ್ರಕಾರ ಹಾಗಲಕಾಯಿ ಅನುಷ್ಣ ಗುಣವನ್ನು ಹೊಂದಿದೆ. ಅಂದರೆ ಅತೀ ಉಷ್ಣವೂ ಅಲ್ಲ, ಅತಿಯಾದ ತಂಪಿನ ಗುಣವೂ ಅಲ್ಲ. ಹೀಗಾಗಿ ಎಲ್ಲರೂ ಹಾಗಲಕಾಯಿಯನ್ನು ಸೇವನೆ ಮಾಡಬಹುದು.

​ಅಜೀರ್ಣ ಸಮಸ್ಯೆಗೆ ಮದ್ದು

ಕೆಲವೊಮ್ಮೆ ನಾವು ತಿಂದ ಆಹಾರ ನಮಗೆ ಸಮಸ್ಯೆ ಉಂಟು ಮಾಡುತ್ತದೆ. ಸರಿಯಾಗಿ ಜೀರ್ಣವಾಗದೆ, ಹೊಟ್ಟೆ ನೋವು, ಹಸಿವೆಯಾಗದೇ ಇರುವುದು ಅಂತಹ ಸಮಸ್ಯೆಗಳು ಕಾಡಬಹುದು. ಇದಕ್ಕೆಲ್ಲ ಹಾಗಲಕಾಯಿ ಅತ್ಯುತ್ತಮ ಪರಿಹಾರವಾಗಿದೆ. ಹಾಗಲಕಾಯಿಯ ಜ್ಯೂಸ್‌ ಅಥವಾ ಅದನ್ನು ಬೇಯಿಸಿ ಪಲ್ಯದ ರೀತಿಯಲ್ಲಿ ಮಾಡಿ ಸೇವನೆ ಮಾಡಬಹುದು. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ.

​ಮಧುಮೇಹಿಗಳಿಗೆ ಬೆಸ್ಟ್‌

ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಇರುವವರಿಗೆ ಅದನ್ನು ತಿನ್ನಬೇಡಿ, ಇದನ್ನು ತಿನ್ನಬೇಡಿ ಎನ್ನುವುದೇ ಹೆಚ್ಚು. ಆದರೆ ಹಾಗಲಕಾಯಿ ಮಧುಮೇಹಿಗಳಿಗೆ ಬಹಳ ಒಳ್ಳೆಯದು. ದೇಹದ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಹಾಗಲಕಾಯಿಯು ಇನ್ಸುಲಿನ್‌ನಂತೆ ಕಾರ್ಯನಿರ್ವಹಿಸುವ ಗುಣಲಕ್ಷಣಗಳನ್ನು ಹೊಂದಿದೆ. ಜೀವಕೋಶಗಳಿಗೆ ಗ್ಲೊಕೋಸ್‌ನ್ನು ಪೂರೈಸುವ ಕೆಲಸ ಮಾಡುತ್ತದೆ. ಹೀಗಾಗಿ ದೇಹ ಸುಸ್ತಾಗದಂತೆಯೂ ತಡೆಯುತ್ತದೆ

​ಬೊಜ್ಜು ಇಳಿಕೆಗೆ ಸಹಕಾರಿ

ದೇಹದಲ್ಲಿನ ಅತಿಯಾದ ತೂಕ ಇಳಿಕೆಗೆ ಹಾಗಲಕಾಯಿ ಸಹಾಯ ಮಾಡುತ್ತದೆ. ದೇಹದಲ್ಲಿನ ಕೊಬ್ಬನ್ನು ಕರಗಿಸಿ ಹೊಸದಾಗಿ ಕೊಬ್ಬಿನ ಕೋಶಗಳ ರಚನೆ ಮತ್ತು ಬೆಳವಣಿಗೆಯನ್ನು ತಡೆಯುತ್ತದೆ. ಹೀಗಾಗಿ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ. ಹಾಗಲಕಾಯಿಯನ್ನು ಸ್ಥೂಲಕಾಯಕ್ಕೆ ಚಿಕಿತ್ಸೆ ನೀಡುವ ನೈಸರ್ಗಿಕ ಪದಾರ್ಥ ಎಂದೇ ಹೇಳಲಾಗುತ್ತದೆ.

​ಚರ್ಮದ ಕಾಯಿಲೆಗೆ ಒಳ್ಳೆಯದು

ಸೋರಿಯಾಸಿಸ್‌, ಮೊಡವೆ, ಅಲರ್ಜಿಯಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಹಾಗಲಕಾಯಿ ಬಹಳ ಒಳ್ಳೆಯದು. ಹಾಗಲಕಾಯಿಯ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ. ಈ ಮೂಲಕ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಇನ್ನು ಹಾಗಲಕಾಯಿಯಲ್ಲಿನ ಉರಿಯೂತದ ಗುಣಲಕ್ಷಣಗಳಿಂದಾಗಿ, ಇದು ಮೊಡವೆಗಳಿಗೆ ಚಿಕಿತ್ಸೆಯ ರೀತಿಯಲ್ಲಿ ಕೆಲಸ ಮಾಡುತ್ತದೆ.