ಮನೆ ರಾಜಕೀಯ ವಿಡಿಯೋ ಮಾಡಿಟ್ಟು ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಆತ್ಮಹತ್ಯೆ

ವಿಡಿಯೋ ಮಾಡಿಟ್ಟು ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಆತ್ಮಹತ್ಯೆ

0

ಬೆಂಗಳೂರು : ಹಣಕಾಸು ನಷ್ಟದಿಂದಾಗಿ ಮನನೊಂದಿದ್ದ ಬಿಜೆಪಿ ಕಾರ್ಯಕರ್ತ ವೆಂಕಟೇಶ್‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಲ್ಲೇಶ್ವರದ ಬಿಜೆಪಿ ಮಂಡಲದ ಕಾರ್ಯಕರ್ತನಾಗಿದ್ದ ವೆಂಕಟೇಶ್‌ ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ ಅವರಿಗೂ ಆಪ್ತನಾಗಿದ್ದರು. ನಿನ್ನೆ ಸಂಜೆ ವೈಯಾಲಿಕಾವಲ್‌ನಲ್ಲಿರುವ ತಮ್ಮ ಟೂರ್ಸ್‌ ಅಂಡ್ ಟ್ರಾವೆಲ್ಸ್‌ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹವನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಇಂದು ಅಶ್ವಥ್‌ ನಾರಾಯಣ್‌ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.

ಮತ್ತೊಂದು ಕಡೆ ವೆಂಕಟೇಶ್‌ ಕಳೆದ 2 ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಶವ ಪತ್ತೆಯಾಗಿದೆ ಅಂತ ಹೇಳಲಾಗ್ತಿದೆ. ಹಣಕಾಸು ನಷ್ಟದಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಪ್ತ ಮೂಲಗಳು ಪೊಲೀಸರಿಗೆ ತಿಳಿಸಿವೆ.

ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಚೀಟಿ ನಡೆಸುತ್ತಿದ್ದರು. ಆದರೆ, 7 ಜನ ಚೀಟಿ ಹಣ ಕಟ್ಟದೇ ಮೋಸ ಮಾಡಿದರು. ಇದೇ ಸಮಯದಲ್ಲಿ ಚೀಟಿ ಕಟ್ಟಿದ್ದ ಇನ್ನುಳಿದ ನಾಲ್ವರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ವೆಂಕಟೇಶ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಯುವ ಮುನ್ನ ವಿಡಿಯೋ ಮಾಡಿಟ್ಟು, ಹಣಕಾಸು ನಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ಜೀವನದಲ್ಲಿ ಏನಾದರೂ ಆಗಿ ಚೀಟಿ ಏಜೆಂಟ್ ಆಗಬೇಡಿ ಅಂತಲೂ ಅಲವತ್ತುಕೊಂಡಿದ್ದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.