ಮನೆ ರಾಜ್ಯ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ಪೊಲೀಸರ ವಶಕ್ಕೆ

ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ಪೊಲೀಸರ ವಶಕ್ಕೆ

0

ಮೈಸೂರು(Mysuru): ಮೈಸೂರು ಅಭಿವೃದ್ಧಿ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಚರ್ಚೆ ವಿಷಯ ಭಾರಿ ಸುದ್ದಿಯಲ್ಲಿದ್ದು, ನಗರದ ಕಾಂಗ್ರೆಸ್ ಕಚೇರಿಗೆ ಬುಧವಾರ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಮೆಟ್ರೋಪೋಲ್ ವೃತ್ತದಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಯುವ ಮೋರ್ಚಾ ಮುಖಂಡರು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಕಿರಣ್‌ ಗೌಡ ಮಾತನಾಡಿ, ಎಂ.ಲಕ್ಷ್ಮಣ ಅವರು ಮೈಸೂರು ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬನ್ನಿ ಎಂದು ಸಂಸದ ಪ್ರತಾಪ ಸಿಂಹ ಅವರಿಗೆ ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ, ಎಚ್‌.ಸಿ.ಮಹದೇವಪ್ಪ ಅವರೊಂದಿಗೆ ಚರ್ಚೆ ನಡೆಸಲು ಪ್ರತಾಪ ಸಿಂಹ ಸಿದ್ಧರಿದ್ದಾರೆ. ಇದುವರೆಗೂ ಜನರಿಂದ ಆಯ್ಕೆಯಾಗದ ಎಂ.ಲಕ್ಷ್ಮಣ ಅವರೊಂದಿಗೆ ನಾವೇ ಚರ್ಚೆ ನಡೆಸಲಿದ್ದೇವೆ ಎಂದರು.

ಪ್ರತಾಪಸಿಂಹ ಸೇರಿದಂತೆ ಪಕ್ಷದ ಮುಖಂಡರ ವಿರುದ್ಧ ಲಕ್ಷ್ಮಣ್‌ ಹಗುರವಾಗಿ ಮಾತನಾಡುತ್ತಿದ್ದಾರೆ. ಮೂರು ಚುನಾವಣೆಗಳನ್ನು ಸೋತಿರುವ ಅವರಿಗೆ ಸಂಸದರಿಗೆ ಸವಾಲು ಹಾಕುವ ಅರ್ಹತೆಯಿಲ್ಲ. ಮೈಸೂರು ಅಭಿವೃದ್ಧಿಗೆ ಸಂಸದರ ಕೊಡುಗೆಯನ್ನು ನಾವೇ ವಿವರಿಸುತ್ತೇವೆ ಎಂದರು.

ನಂತರ ಕುರ್ಚಿಗಳನ್ನು ಹೊತ್ತ ಕಾರ್ಯಕರ್ತರು ಕಾಂಗ್ರೆಸ್ ಭವನದತ್ತ ತೆರಳಲು ಮುಂದಾದರು. ಉದ್ವಿಗ್ನತೆ ನಿಯಂತ್ರಿಸಲು ಅವರನ್ನು ಪೊಲೀಸರು ವಶಕ್ಕೆ ಪಡೆದರು.