ಮನೆ ರಾಷ್ಟ್ರೀಯ ರಾಗಾ ಭಾಷಣದ ವಿರುದ್ಧ ಹಕ್ಕುಚ್ಯುತಿ, ಮಂಡಿಸಲು ಬಿಜೆಪಿ ನಿರ್ಧಾರ..!

ರಾಗಾ ಭಾಷಣದ ವಿರುದ್ಧ ಹಕ್ಕುಚ್ಯುತಿ, ಮಂಡಿಸಲು ಬಿಜೆಪಿ ನಿರ್ಧಾರ..!

0

ನವದೆಹಲಿ : ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿದ್ದಕ್ಕಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜುಜು ಹೇಳಿದ್ದಾರೆ.

ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವು ಭಾರತ ಮಾತೆಯನ್ನು ಮಾರಿಬಿಟ್ಟಿದೆ ಎಂದು ಆರೋಪಿಸಿದ್ದರು. ಅಲ್ಲದೇ, ಭಾರತ-ಅಮೆರಿಕ ವಾಣಿಜ್ಯ ಒಪ್ಪಂದವು ‘ಸಂಪೂರ್ಣ ಶರಣಾಗತಿ’ ಎಂದು ಆರೋಪಿಸಿದ್ದರು. ಭಾರತದ ಶಕ್ತಿ ಸುರಕ್ಷತೆಯನ್ನು ಅಮೆರಿಕಕ್ಕೆ ಒಪ್ಪಿಸಲಾಗಿದೆ. ರೈತರ ಹಿತಾಸಕ್ತಿಗಳನ್ನು ರಾಜಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು.

ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಕಿರಣ್‌ ರಿಜಿಜು, ರಾಹುಲ್ ಗಾಂಧಿ ಸರ್ಕಾರ ಮತ್ತು ಪ್ರಧಾನಿ ವಿರುದ್ಧ ಆಧಾರ ರಹಿತ ಹಾಗೂ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಭಾರತವನ್ನು ಯಾರೂ ಮಾರಲಾರರು, ಖರೀದಿಸಲಾರರು ಎಂದು ನಾನು ಅವರಿಗೆ ನೆನಪಿಸಿದೆ. ಯಾವುದೇ ಸದಸ್ಯ ಗಂಭೀರ ಆರೋಪ ಮಾಡಬೇಕಾದರೆ ಮುಂಚಿತವಾಗಿ ನೋಟಿಸ್ ನೀಡಬೇಕು ಎಂದು ನಿಯಮಗಳಿವೆ. ಆರೋಪಗಳನ್ನು ಸಾಬೀತುಪಡಿಸಬೇಕು.

ರಾಹುಲ್ ಗಾಂಧಿ ಯಾವುದೇ ಪುರಾವೆ, ಚರ್ಚೆ ಅಥವಾ ನಿಯಮಾವಳಿ ನೋಟಿಸ್ ಇಲ್ಲದೆ ಆರೋಪ ಮಾಡಿದ್ದಾರೆ ಎಂದು ರಿಜಿಜು ಆರೋಪಿಸಿದರು. ರಾಹುಲ್‌ ಗಾಂಧಿ ಅವರ ಭಾಷಣದ ಎಲ್ಲಾ ತಪ್ಪು ಹೇಳಿಕೆಗಳು, ಸುಳ್ಳು ಆರೋಪಗಳು ಮತ್ತು ಅಸಭ್ಯ ಪದಗಳನ್ನು ದಾಖಲೆಗಳಿಂದ ತೆಗೆದುಹಾಕಬೇಕು ಎಂದು ಕಿರಣ್ ರಿಜುಜು ಒತ್ತಾಯಿಸಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ವಿರುದ್ಧವೂ ನೋಟಿಸ್ ಇಲ್ಲದೆ ಗಂಭೀರ ಆರೋಪ ಮಾಡಲಾಗಿದೆ ಎಂದು ಅವರು‌, ಈ ಹಿನ್ನೆಲೆ ಹಕ್ಕುಚ್ಯುತಿ ಮಂಡಿಸಲಾಗುತ್ತಿದೆ.