ಶಿವಮೊಗ್ಗ: ಬಿಜೆಪಿಗೆ ಶಿವಮೊಗ್ಗದಲ್ಲಿ ಮುಸ್ಲಿಂ ವೋಟ್ ಬೇಡ ಎಂದು ಮಾಜಿ ಸಚಿವ ಹಾಲಿ ಶಿವಮೊಗ್ಗ ಶಾಸಕ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿ ವೀರಶೈವ-ಲಿಂಗಾಯತ ಸಮಾಜದ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವೀರಶೈವ ಸಮುದಾಯದವರನ್ನ ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ ವಿವರದ ಬಗ್ಗೆ ನಾನು ಮಾತನಾಡುವುದಿಲ್ಲ. ಅಭಿವೃದ್ಧಿ ನಾವು ಅನುಭವಿಸುತ್ತಿದ್ದೇವೆ. ಆದರೆ ನಾನು ನಿಮಗೆ ಎಚ್ಚರಸುತ್ತಿರುವುದು ಜಾತಿ ಹಾಗೂ ಉಪಜಾತಿಗಳನ್ನು ಇಟ್ಟುಕೊಂಡು ಬರುವ ವ್ಯಕ್ತಿಗಳ ಬಗ್ಗೆ ಮಾತ್ರ. ಯಾರೂ ಕೂಡ ನಮ್ಮನ್ನ ಒಡೆಯದಂತೆ ನೋಡಿಕೊಳ್ಳಬೇಕು. ಶಿವಮೊಗ್ಗದಲ್ಲಿ 50 ರಿಂದ 56,000 ಮುಸ್ಲಿಂ ವೋಟ್ ಗಳಿವೆ ಎಂದು ಹೇಳುತ್ತಾರೆ. ನಮಗೆ ಅವರ ಒಂದೂ ವೋಟ್ ಬೇಡ.! ಎಂದು ಹೇಳಿದರು.
ಶಿವಮೊಗ್ಗದಲ್ಲಿ ಹರ್ಷ ಕೊಲೆ ಸಮಯದಲ್ಲಿ ಕಾಂಗ್ರೆಸ್ ಬಾಯಿ ಮುಚ್ಚಿಕೊಂಡಿತ್ತು. ನಾನು ಎಸ್ ಪಿ ಜೊತೆ ಮಾತನಾಡುವಾಗ ಒಮ್ಮೆ ಲವ್ ಜಿಹಾದ್ ಬಗ್ಗೆ ಪ್ರಸ್ತಾಪಿಸಿದ್ದೆ. ಲವ್ ಜಿಹಾದ್ ಪ್ರಕರಣಗಳಲ್ಲಿ ಮಹಿಳೆಯರು ದೂರು ನೀಡಲು ಹಿಂಜರಿಯುತ್ತಾರೆ ಎಂದು ಹೇಳಿದರು.
ಅಂತಹ ಎಷ್ಟೋ ಪ್ರಕರಣಗಳು ದಾಖಲಾಗದೆ ಉಳಿಯುತ್ತದೆ. ನಮ್ಮ ಹೆಣ್ಣು ಮಕ್ಕಳಿಗೆ ಆ ಮುಸ್ಲಿಮರು ತೊಂದರೆ ಕೊಟ್ಟರೆ ಕಾಂಗ್ರೆಸ್ ನಾಯಕರು ಬರೋದಿಲ್ಲ. ಅವರು ಗಟ್ಟಿಯಾಗಿ ನಿಲ್ಲೋದಿಲ್ಲ. ಇಲ್ಲಿ ನಾವು ಯೋಚನೆ ಮಾಡಬೇಕಾಗಿರೋದು ಬರೀ ರಸ್ತೆ, ಚರಂಡಿ ದೀಪ ಕುಡಿಯುವ ನೀರಿನ ಬಗ್ಗೆ ಅಲ್ಲ. ನಮ್ಮ ವೈಯಕ್ತಿಕ ಬದುಕಿನ ಬಗ್ಗೆ. ನಮ್ಮ ಧರ್ಮದ ಬಗ್ಗೆ. ಈ ದೇಶದ ಉಳಿವಿನ ಬಗ್ಗೆ. ಇದನ್ನೇ ಬಸವೇಶ್ವರರು ಹೇಳಿದ್ದು ಎಂದು ಈಶ್ವರಪ್ಪ ಹೇಳಿದರು.
ಯಾವುದೇ ಸಮಾಜದ ವ್ಯಕ್ತಿ ಹೊರಗಡೆ ಸಿಕ್ಕಾಗ ಬಿಜೆಪಿ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನೆ ಮಾಡಿ. ಬಿಜೆಪಿ ಅವರಿಗೆ ಏನು ಮಾಡಿಲ್ಲ ಎಂದರೆ ಆ ಸಮುದಾಯದ ವೋಟ್ ಕೇಳಲೇಬೇಡಿ. ಎಲ್ಲಾ ಸಮುದಾಯದವರು ಬಿಜೆಪಿಗೆ ವೋಟು ನೀಡುತ್ತೇವೆ ಅಂತ ಹೇಳುತ್ತಿದ್ದಾರೆ. ಕೆಲವರು ಈ ಸಂದರ್ಭದಲ್ಲಿ ಜಾತಿ ಉಪಜಾತಿಯನ್ನು ತರುತ್ತಿದ್ದಾರೆ. ಶಿವಮೊಗ್ಗದಲ್ಲಿ ಈ ಜಾತಿ ವ್ಯವಸ್ಥೆಗೆ ಮಾರುಹೋಗುತ್ತಾರೆ ಎಂಬ ನಂಬಿಕೆ ನನಗಿಲ್ಲ. ನೂರಕ್ಕೆ ನೂರು ನಮ್ಮ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಗೆಲ್ಲುತ್ತಾರೆ. ಹಿಂದೂ ಸಮಾಜಕ್ಕೆ ಮಾದರಿ ನಮ್ಮ ಬಿಎಸ್ ಯಡಿಯೂರಪ್ಪ. ಯಡಿಯೂರಪ್ಪಕ್ಕಿಂತ ಹಿಂದೂ ಯಾರೂ ಇಲ್ಲ. ಇಂತಹ ಹಿಂದೂ ಸಮಾಜ ಕಟ್ಟುವ ದಿಕ್ಕಿನಲ್ಲಿ ಶಿವಮೊಗ್ಗ ನಾಯಕ ಚನ್ನಬಸಪ್ಪ ಶ್ರಮಿಸಲಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ.
ಬಿಜೆಪಿ ಬಿಟ್ಟು ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕೂಡ ನಮಗೆ ಭದ್ರತೆ ಇರುವುದಿಲ್ಲ ಕಾಂಗ್ರೆಸ್ ಹಿಂದು ಮುಸ್ಲಿಂ ಎಂದು ಪ್ರತ್ಯೇಕ ಮಾಡಿ ಮುಸ್ಲಿಂ ವೋಟ್ ಗಳನ್ನ ಪಡೆಯುತ್ತಿದೆ. ವರ್ಣ ಪ್ರೇರೇಪಿಸಿ ಹಿಂದೂ ಸಮಾಜವನ್ನು ನಿಕೃಷ್ಟ ಮಾಡುವ ಪ್ರಯತ್ನ ಮಾಡಿಕೊಂಡು ಬಂದಿದೆ. ಯಾರು ರಾಷ್ಟ್ರೀಯವಾದಿ ಮುಸಲ್ಮಾನರಿದ್ದಾರೋ ಅವರು ಬಿಜೆಪಿಗೆ ವೋಟ್ ನೀಡುತ್ತಾರೆ. ರಾಷ್ಟ್ರ ದ್ರೋಹಿ ಮುಸ್ಲಿಂ ಸಹವಾಸಕ್ಕೆ ನಾವು ಹೋಗುವುದು ಬೇಡ. ಯಡಿಯೂರಪ್ಪ ಜಾತಿವಾದಿ ಅಲ್ಲ, ಅವರು ರಾಷ್ಟ್ರೀಯವಾದಿ. ಅವರು ರಾಷ್ಟ್ರವಾದದ ಮೇಲೆ ಸರ್ಕಾರ ನಡೆಸಿಕೊಂಡು ಬಂದಿದ್ದಾರೆ.
ಬಿಜೆಪಿ ಜಾತಿವಾದಿ ಪಕ್ಷ ಅಲ್ಲ ರಾಷ್ಟ್ರೀಯವಾದಿ ಪಕ್ಷ. ನಾವೆಲ್ಲಾ ಸಂಕುಚಿತ ವ್ಯಕ್ತಿಗಳ ಬಗ್ಗೆ ಚರ್ಚೆ ಮಾಡುವುದು ಬೇಡ. ಕಾಂಗ್ರೆಸ್ ನಿರ್ನಾಮ ಆಗಿದೆ. ಸಿಎಂ ಆಗಬೇಕು ಎಂದು ಸ್ಪರ್ಧೆ ಏರ್ಪಟ್ಟಿದೆ. ಜನತಾದಳ ಯಾರಿಗೂ ಬಹುಮತ ಬರಬಾರದು ತಾವು ಸಿಎಂ ಆಗಬೇಕು ಅಂತ ಹವಣಿಸುತ್ತಿದೆ. ಇಷ್ಟು ವರ್ಷ ಪೂರ್ಣ ಬಹುಮತ ಇಲ್ಲದ ಸಮಯದಲ್ಲಿ ಯಡಿಯೂರಪ್ಪನವರು ನಾಲ್ಕು ಬಾರಿ ಸಿಎಂ ಆಗಿದ್ದರು ಎಂದು ಈಶ್ವರಪ್ಪ ಹೇಳಿದರು.