ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟಕ್ಕಿಳಿದಿರುವ ಬಿಜೆಪಿಯವರೇನು ಸತ್ಯ ಹರಿಶ್ಚಂದ್ರರೇ?, ಪ್ರತಿಭಟನೆ ಮಾಡಲು ಅವರಿಗೆ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ, ವಿಧಾನಪರಿಷತ್ತು ಸದಸ್ಯ ಜಗದೀಶ ಶೆಟ್ಟರ್ ಪ್ರಶ್ನಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷರಿಲ್ಲ, ವಿಧಾನಸಭೆ ವಿಪಕ್ಷ ನಾಯಕನಿಲ್ಲ. ಯಾರ ನೇತೃತ್ವದಲ್ಲಿ ಹೋರಾಟ ಮಾಡುತ್ತೀರಿ, ಯಾಕೆ ಹೋರಾಟ ಮಾಡುತ್ತೀರಿ, ಭ್ರಷ್ಟಾಚಾರದ ಆಡಳಿತಕ್ಕಾಗಿಯೇ ರಾಜ್ಯದ ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನಿಮಗೆ ಏನು ನೈತಿಕತೆ ಇದೆ ಎಂದರು.
ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಾಗಿ ರಾಜ್ಯದ ಕಾಂಗ್ರೆಸ್ ಸರಕಾರ 1000 ಕೋಟಿ ರೂ.ಗಳನ್ನು ಸಂಗ್ರಹ ಮಾಡಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹೇಳಿಕೆ ಸರಿಯಲ್ಲ. ಈ ಬಗ್ಗೆ ಅವರ ಬಳಿ ಸಾಕ್ಷಿ ಗಳೇನಾದರು ಇವೆಯೇ ಎಂದು ಪ್ರಶ್ನಿಸಿದರು.
ಜವಾಬ್ದಾರಿ ಯುತ ಸ್ಥಾನದಲ್ಲಿರುವ ಜೋಶಿಯವರಿಗೆ ಇಂತಹ ಹೇಳಿಕೆ ಶೋಭೆ ತರದು. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಐಟಿ ದಾಳಿಗಳಾಗಿವೆ. ಅದರ ಅಂತಿಮ ಫಲಿತಾಂಶ ಏನೆಂಬುದು ಬಹಿರಂಗ ಪಡಿಸಿಲ್ಲ. ಐಟಿ ನಿಮ್ಮ ನಿಯಂತ್ರಣದಲ್ಲಿಯೇ ಇದೆ. ದಾಳಿಗೆ ಒಳಗಾದವರು ಹಣ ಯಾರದ್ದು ಎಂದು ಹೇಳಿದ್ದಾರೆಯೇ? ಯಾವ ಆಧಾರದಲ್ಲಿ ಚುನಾವಣೆಗೆ ಸಂಗ್ರಹಿಸಿದ ಹಣ ಎಂದು ಹೇಳುತ್ತೀರಿ ಎಂದು ಪ್ರಶ್ನಿಸಿದರು.
ಯಾವುದೇ ಎಸ್ಕಾಂ ಗಳು ಬಿಜೆಪಿ ಸರಕಾರದಲ್ಲೂ ಲಾಭದಲ್ಲಿ ಏನು ಇರಲಿಲ್ಲ. ಎಲ್ಲ ಸರಕಾರದಲ್ಲೂ ನಷ್ಟದಲ್ಲಿವೆ. ಮಳೆ ಅಭಾವದಿಂದ ಪ್ರಸ್ತುತ ವಿದ್ಯುತ್ ಉತ್ಪಾದನೆಯಲ್ಲಿ ಕೊರತೆಯಾಗಿದೆ. ಸರಕಾರ ಬೇರೆ ಮಾರ್ಗದಿಂದ ವಿದ್ಯುತ್ ಖರೀದಿ ಮಾಡುತ್ತಿದೆ ಎಂದರು.