ಮೈಸೂರು: ಬಿಜೆಪಿ ಹೆಸರಿಗೆ ಮಾತ್ರ ರಾಮರಾಜ್ಯ ಎನ್ನುತ್ತಾರೆ. ಮಾಡುವುದೆಲ್ಲಾ ಅಧರ್ಮದ ಕೆಲಸ ಎಂದು ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಪ್ರಧಾನಿಯಾದ ದಿನದಿಂದಲೇ ಪ್ರಜಾಪ್ರಭುತ್ವದ ಕಗ್ಗೊಲೆ ಶುರುವಾಗಿದೆ. ಸರ್ವಾಧಿಕಾರಿ ಧೋರಣೆ ಎದ್ದು ಕಾಣುತ್ತಿದೆ. ಅವರು ವಿರುದ್ದ ಮಾತನಾಡಿದವರನ್ನು ಮುಗಿಸುವ ಹೆದರಿಸುವ ಬೆದರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳನ್ನು ಮೋದಿ ಸಹಿಸುತ್ತಿಲ್ಲ. ಹೇಗಾದರೂ ಮಾಡಿ ಸರ್ಕಾರಗಳನ್ನು ಬೀಳಿಸುವ ತಂತ್ರ ಮಾಡುತ್ತಿದ್ದಾರೆ. ಸರ್ಕಾರ ಬೀಳಿಸುವುದು ಬಿಜೆಪಿಯ ಹುಟ್ಟುಗುಣ. ಜಾರ್ಖಂಡ್‌ನಲ್ಲಿ ಸೇರಿ ಹಲವು ಕಡೆ ನಡೆಯುತ್ತಿರುವುದು ಇದೆ. ತನಿಖಾ ಸಂಸ್ಥೆಗಳನ್ನು ಇದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಲೋಕಸಭೆಯಲ್ಲಿ ಸಚಿವರು ಸ್ಪರ್ಧೆ ಮಾಡಿದರೆ ತಪ್ಪೇನು? ಕೆಲವು ಆಂತರಿಕ ಚರ್ಚೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಇದು ಹೈಕಮಾಂಡ್ ನಿರ್ಧಾರ. ಅವರ ತೀರ್ಮಾನಕ್ಕೆ ಎಲ್ಲರೂ ಬದ್ದ. ಅವರು ಹೇಳಿದರೆ ಸ್ಪರ್ಧೆ ಮಾಡಲೇ ಬೇಕು. ಇದು ಒಳ್ಳೆಯ ಬೆಳವಣಿಗೆ ಎಂದರು.
ದೆಹಲಿಯಲ್ಲಿ ಪ್ರತಿಭಟನೆ ಸಮರ್ಥನೆ ಮಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಅನಿವಾರ್ಯವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಇದು ಕರ್ನಾಟಕದ ಪರಿಸ್ಥಿತಿ ಮಾತ್ರವಲ್ಲ. ಬಿಜೆಪಿ ಸರ್ಕಾರ ಇಲ್ಲದ ಎಲ್ಲಾ ರಾಜ್ಯದ ಪರಿಸ್ಥಿತಿ ಇದೆ ಆಗಿದೆ. ಈ ಕಾರಣಕ್ಕಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ, ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಸಂಸದರಿಗೆ ಮೋದಿ ಮುಂದೆ ಕೇಳುವ ಧೈರ್ಯವಿಲ್ಲ. ಸುಖಾಸುಮ್ಮನೆ ನಮ್ಮ ಮೇಲೆ ಕೂಗಾಡುತ್ತಾರೆ. ಇದೇ ಕೆಲಸವನ್ನು ಮೋದಿ ಮುಂದೆ ಮಾಡಿದ್ದರೆ ಪ್ರತಿಭಟನೆ ಅವಶ್ಯಕತೆಯೇ ಇರಲಿಲ್ಲ ಎಂದರು.
ಕಾಂಗ್ರೆಸ್ ಗೆ ದೇಶ ಒಡೆಯುವ ಮನಸ್ಥಿತಿಯಲ್ಲೇ ಇದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿ, ಬಿಜೆಪಿ ಯಾವತ್ತೂ ದೇಶ ಕಟ್ಟುವ ಕೆಲಸ ಮಾಡಿಲ್ಲ. ಬ್ರಿಟಿಷರ ವಿರುದ್ದ ಕಾಂಗ್ರೆಸ್ ಹೋರಾಡಿದಾಗ ಹಿಂದೂ ಮಹಾಸಭಾ ಬ್ರಿಟಿಷ್ ಪರವಿದ್ದರು. ಪಾಕಿಸ್ತಾನವನ್ನು ಇಬ್ಭಾಗ ಮಾಡಿದ್ದು ನಾವೇ ಅದನ್ನು ಹೊರತುಪಡಿಸಿ ಎಲ್ಲವನ್ನೂ ಒಗ್ಗೂಡಿಸಿದ್ದೇವೆ. ಆರ್ ಎಸ್ಎಸ್ ಹಿಂದೂ ಮಹಾಸಭಾ ಎಂದೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಅವರು ದೇಶ ಭಕ್ತರಲ್ಲ ಎಂದು ಹೇಳಲ್ಲ, ಆದರೆ ಅವರು ಮಾತ್ರ ದೇಶಭಕ್ತರು ಬೇರೆಯವರು ಅಲ್ಲ ಎನ್ನೋದನ್ನು ನಾವು ಒಪ್ಪಲ್ಲ ಎಂದರು,
ದಕ್ಷಿಣ ಭಾರತ ಉತ್ತರ ಭಾರತ ಪ್ರತ್ಯೇಕತೆ ಬಗ್ಗೆ ಸಂಸದ ಡಿ ಕೆ ಸುರೇಶ್ ಹೇಳಿಕೆ ಬಗ್ಗೆ ಮಾತನಾಡಿ, ಆ ರೀತಿ ಹೇಳಿಕೆ ಸರಿಯಲ್ಲ. ಆ ರೀತಿ ಹೇಳಬಾರದು. ಇದನ್ನು ನಾನು ಸಿಎಂ ಸೇರಿ ಎಲ್ಲರೂ ಹೇಳಿದ್ದೇವೆ. ಆದರೆ ಅವರು ಹೇಳಿರುವ ಉದ್ದೇಶ ಬೇರೆ ಇದೆ ಎಂದರು.
ಗ್ಯಾರಂಟಿ ನಿಲ್ಲಲ್ಲ: ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗೆ ಬ್ರೇಕ್ ಎಂಬ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರಕ್ಕೆ ಮಾತನಾಡಿ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ. ಬಾಲಕೃಷ್ಣ, ರಾಜಣ್ಣ, ಯಾರೋ ಏನೋ ಹೇಳಿದರೆಂದು ಗ್ಯಾರಂಟಿ ಯೋಜನೆ ನಿಲ್ಲಲ್ಲ. ಸಿದ್ದರಾಮಯ್ಯ ಹೇಳಿದ ಎಲ್ಲಾ ಕೆಲಸ ಮಾಡಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು.