ಮಂಡ್ಯ: ಬಿಪಿಎಲ್ ಕಾರ್ಡ್ ರದ್ದತಿ ಕುರಿತು ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದರೆ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು,ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮದು ಜನಪರ ಸರ್ಕಾರ. ಯಾವುದೇ ಬಡವರ ಬಿಪಿಎಲ್ ಕಾರ್ಡ್ ರದ್ದಾಗಲ್ಲ. ಬಿಜೆಪಿಯವರು ಮುಂದಿನ ಗುರಿ ಬಗ್ಗೆ ತಿಳಿಸಲಿ. ಮೊಸರಲ್ಲಿ ಕಲ್ಲು ಹುಡುಕುವ ಬಿಡಲಿ ಎಂದು ಕುಟುಕಿದರು.
ಸುಮಲತಾ 5 ವರ್ಷ ಸಂಸದೆಯಾಗಿ ಬಹಳ ಕೆಲಸ ಮಾಡಿದ್ದಾರೆ. ಬಿಜೆಪಿ ಆಡಳಿತ ಕಾಲದಲ್ಲಿ ರೈತರಿಗೆ ಬಹಳಷ್ಟು ಅನ್ಯಾಯವಾಗಿದೆ.ಇದರ ಬಗ್ಗೆ ಸುಮಲತಾ ಹೋರಾಟ ಮಾಡಲಿ ಎಂದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ರಾಜ್ಯಕ್ಕೆ ನೀಡಬೇಕಾಗಿದ್ದ ಸಾಲದ ಮೊತ್ತವನ್ನು ಕಡಿತಗೊಳಿಸಿರುವುದು ರೈತ ವಿರೋಧಿ ನೀತಿಯಾಗಿದೆ, ಈ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾತನಾಡದೇ ಏಕೆ ಮೌನ ವಹಿಸಿದ್ದಾರೆಂದು ಪ್ರಶ್ನಿಸಿದರು.
ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುವ ಸಹಕಾರ ಸಂಘಗಳಿಗೆ ನೀಡಲಾಗುವ ಸಾಲದ ಮೊತ್ತವನ್ನು ನಬಾರ್ಡ್ ಬ್ಯಾಂಕ್ ಕಡಿತಗೊಳಿಸಿದೆ. ಆದರೆ ಈ ಸಂದರ್ಭದಲ್ಲಿ ದೇವೇಗೌಡರು ಮೌನವಾಗಿ ರುವುದೇಕೆ ಎಂದರು.
ಆರ್.ಬಿ.ಐ ಮೂಲಕ ನಬಾರ್ಡ್ ಗೆ ಹೆಚ್ಚು ಹಣ ನೀಡಿ, ರಾಷ್ಟ್ರದ ಕೃಷಿಕರಿಗೆ ನೆರವಾಗಬೇಕಿದ್ದ ಕೇಂದ್ರ ಸರ್ಕಾರ ಸಾಲದ ಮೊತ್ತವನ್ನು ಶೇ. 50ರಷ್ಟು ಕಡಿತಗೊಳಿಸಿ ರೈತವಿರೋಧಿ ನಿಲುವು ತಾಳಿದೆ. ಈ ಬಗ್ಗೆ ಮಾಜಿ ಪ್ರದಾನಿ ದೇವೇಗೌಡರು ಚಕಾರವೆತ್ತದಿರುವುದು ಈ ನಾಡಿದ ದುರಂತವಲ್ಲವೇ ಎಂದು ಪ್ರಶ್ನಿಸಿದರು
ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲ್ ವಿರುದ್ಧ ಹೋರಾಟ ನಡೆಸಿದ್ದ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರು ರೈತ ವಿರೋಧಿ ನಿಲುವಿನ ಬಗ್ಗೆ ಏಕೆ ಮೌನ ವಹಿಸಿದ್ದಾರೆ ? ಈ ಬಗ್ಗೆ ಕೇಂದ್ರ ಸಚಿವರಾದ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೌನವಾಗಿರುವ ಗುಟ್ಟೇನು ಎಂದು ಪ್ರಶ್ನಿಸಿದರು.
ಕಳೆದ ವರ್ಷ ರಾಜ್ಯಕ್ಕೆ 5,600 ಕೋಟಿ ರೂ. ಬೆಲೆ ಸಾಲ ಬಿಡುಗಡೆಯಾಗಿತ್ತು.ಆದರೆ ಈ ಬಾರಿ 2340 ಕೋಟಿ ಬಿಡುಗಡೆಗೊಳಿಸಿ ಕೇಂದ್ರ ಸರ್ಕಾರ ರಾಜ್ಯಕ್ಕೆ ದ್ರೋಹ ಬಗೆದಿದೆ ಎಂದು ಕಿಡಿಕಾರಿದರು.
ಜಿಲ್ಲೆಯ ವಿವಿಧೆಡೆ ರೈತರು ಬೆಳೆದಿರುವ ಭತ್ತದ ಫಸಲು ಕೀಟಬಾಧೆಯಿಂದ ನಾಶವಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ರೈತರ ನೆರವಿಗೆ ಧಾವಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗ ಸೂಚಿಸಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಉಪಚುನಾವಣೆಯಲ್ಲಿ ‘ಕೈ’ ಮೇಲುಗೈ
ಇಂದು ಪ್ರಕಟವಾಗುವ ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಕಾಂಗ್ರೆಸ್ ಗೆ ನೆರವಾಗಲಿದ್ದು, ಚನ್ನಪಟ್ಟಣ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ಜಯಗಳಿಸುವುದು ಖಾತ್ರಿಯಾಗಿದ್ದು, ಶಿಗ್ಗಾವಿ ಕ್ಷೇತ್ರದ ಗೆಲುವಿಗೂ ಶ್ರಮಿಸಲಾಗಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 2013- 18ರಲ್ಲಿ ಕೈಗೆತ್ತಿಕೊಂಡಿದ್ದ ಬೆಂಗಳೂರು ಮಹಾನಗರದ 50 ಲಕ್ಷ ಮಂದಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಪೂರ್ಣ ಗೊಳಿಸಲು ವಿಫಲವಾದ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳ ನಿರ್ಲಕ್ಷತೆಯನ್ನು ಗಮನಿಸಿ, 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರವೇ ಸದರಿ ಯೋಜನೆ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಿರುವುದು ನಮ್ಮ ಸಾಧನೆಯಲ್ಲವೇ ಎಂದು ಪ್ರಶ್ನಿಸಿದರು.
ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ 5 ಗ್ಯಾರಂಟಿಗಳನ್ನು ಅನುಷ್ಟಾನಗೊಳಿಸಿರುವುದು, ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿರುವುದು,ಭದ್ರಾ ಡ್ಯಾಂ ಗೇಟ್ ಗಳ ದುರಸ್ಥಿಗೆ ತುರ್ತು ಕ್ರಮ ವಹಿಸಿ ರೈತರ ಬಗ್ಗೆ ಕಾಳಜಿ ತೋರಿರುವುದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಕಾಳಜಿಯಲ್ಲವೇ ಎಂದು ಕುಟುಕಿದರು.
ನರೇಂದ್ರಸ್ವಾಮಿಗೆ ಸಚಿವ ಪದವಿ
ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಅವರಿಗೆ ಪಕ್ಷದ ಹಿರಿತನ ಗಮನಿಸಿ, ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯಕ್ಕೆ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಸೇರಿದಂತೆ ಒಕ್ಕೊರಲ ಆಗ್ರಹವಿದೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ನರೇಂದ್ರಸ್ವಾಮಿ ನೋವಿನಲ್ಲಿದ್ದಾರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲವೆಂದರು.
ಪಕ್ಷ ಅಧಿಕಾರಕ್ಕೆ ಬಂದ ವೇಳೆಯಲ್ಲಿ ಹೈ ಕಮಾಂಡ್, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನೀಡಿರುವ ಭರವಸೆಯನ್ನು ಕಾರಣಾಂತರದಿಂದ ಈಡೇರಿಸಲು ಸಾಧ್ಯವಾಗಿಲ್ಲ, ಅದು ಮುಂದಿನ ಸಂಪುಟ ವಿಸ್ತರಣೆ ಅಥವಾ ಪುನರಚನೆ ವೇಳೆ ನರೇಂದ್ರಸ್ವಾಮಿಗೆ ಸಚಿವ ಗಾದಿ ಒಲಿಯವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿದರು.















