ರಾಯಚೂರು: ಬಿಜೆಪಿಯವರು ಮಂದಿರ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅದಕ್ಕೆ ಮಾತ್ರ ನಮ್ಮ ವಿರೋಧ ಇದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ತಿಂಥಿಣಿಯ ಕಾಗಿನೆಲೆ ಕನಕಗುರುಪೀಠದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನಾನು ಅಯೋಧ್ಯೆಗೆ ಹೋಗಲ್ಲ ಎಂದೂ ಹೇಳಿಲ್ಲ. ಹೋಗುತ್ತೇನೆ ಎಂದೂ ಹೇಳಿಲ್ಲ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಮೂರ್ತಿ ಸ್ಥಾಪನೆಗಾಗಲಿ, ಮಂದಿರ ಉದ್ಘಾಟನೆಗಾಗಲಿ. ಅದಕ್ಕೆ ನಮ್ಮ ವಿರೋಧ ಇಲ್ಲ. 22ರಂದು ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದ್ದಾರೆ. ಇದು ಸರಿಯಲ್ಲ ಎಂದರು.
ಶಾಸಕ ಯತೀಂದ್ರರನ್ನು ಕೊಡಗು ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿಸುವುದಾಗಿ ನಾನಾಗಲಿ ಬೇರೆ ಯಾರಾದರೂ ಹೇಳಿದ್ದಾರಾ? ಸಂಸದ ಪ್ರತಾಪ ಸಿಂಹಗೆ ಸೋಲಿನ ಭೀತಿ ಶುರುವಾಗಿದೆ. ಹೀಗಾಗಿ ಅವರಿಗೆ ಚಡಪಡಿಕೆ ಶುರುವಾಗಿದೆ. ಭೈರತಿ ಸುರೇಶ ವೀಕ್ಷಕರಾಗಿ ಹೋಗಿದ್ದು, ಅವರು ವರದಿ ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಸ್ಥಳೀಯ ಶಾಸಕರು, ಸಂಸದರು, ಮುಖಂಡರ ಅಭಿಪ್ರಾಯ ಪಡೆದು ಟಿಕೆಟ್ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ಈಗ ಕಾಂತರಾಜ್ ಸಮೀಕ್ಷಾ ವರದಿಯನ್ನು ಎರಡು ತಿಂಗಳೊಳಗೆ ಕೊಡಲು ಸಮಯ ಕೊಟ್ಟಿದ್ದೇನೆ. ಅಷ್ಟರೊಳಗೆ ನೀಡಿದರೆ ಸ್ವೀಕರಿಸಲಾಗುವುದು ಎಂದು ತಿಳಿಸಿದರು.