ಗುವಾಹಟಿ : ಕಳೆದ ಹತ್ತು ವರ್ಷಗಳಲ್ಲಿ ಅಸ್ಸಾಂ ಗಮನಾರ್ಹ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ರಾಜ್ಯದ ಜನರು ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟಕ್ಕೆ ಮತ್ತೊಮ್ಮೆ ಆಶೀರ್ವದಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೋಗಮುಖ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾಗರಿಕರಲ್ಲಿನ ಉತ್ಸಾಹವು ನಿರಂತರ ಬೆಳವಣಿಗೆ ಮತ್ತು ಸ್ಥಿರತೆಗೆ ಅವರ ಬೆಂಬಲವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಈ ಬಾರಿಯ ಚುನಾವಣೆಯು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡಲಿದೆ. ಬಿಜೆಪಿ ಅಸ್ಸಾಂನಲ್ಲಿ ಮತ್ತೆ ಸರ್ಕಾರ ರಚಿಸುತ್ತದೆ ಮತ್ತು ಹ್ಯಾಟ್ರಿಕ್ ಸಾಧಿಸುತ್ತದೆ ಎಂದು ಹೇಳಿದರು.
ಅಸ್ಸಾಂನ ಜನರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲು ಸಿದ್ಧರಾಗಿದ್ದಾರೆ. ಮುಂಬರುವ ಚುನಾವಣೆಯು ಎನ್ಡಿಎಗೆ ಸ್ಪಷ್ಟ ಹ್ಯಾಟ್ರಿಕ್ ನೀಡುತ್ತದೆ. ಸ್ವಯಂ ಘೋಷಿತ ರಾಜಕುಮಾರನಿಗೆ ಇದು ಹ್ಯಾಟ್ರಿಕ್ ಸೋಲು ಮತ್ತು ಶತಮಾನದ ಸೋಲು ಎಂದು ರಾಹುಲ್ ಗಾಂಧಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಸ್ಸಾಂ ಚುನಾವಣೆ ಘೋಷಣೆಯಾದ ನಂತರ, ಇದು ನನ್ನ ಮೊದಲ ಸಾರ್ವಜನಿಕ ಸಭೆ. ಮೂರನೇ ಬಾರಿಗೆ ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂಬುದಕ್ಕೆ ಈ ಜನಸಾಗರವೇ ಸಾಕ್ಷಿ ಎಂದು. ಪ್ರಧಾನಿಯಾಗುವಲ್ಲಿ ತಾವು ಹ್ಯಾಟ್ರಿಕ್ ಪಡೆದಿದ್ದೇವೆ ಮತ್ತು ಅವರ ಆಶೀರ್ವಾದವು ಅಸ್ಸಾಂನಲ್ಲಿ ಬಿಜೆಪಿಗೆ ಮತ್ತೊಂದು ಹ್ಯಾಟ್ರಿಕ್ ನೀಡುತ್ತದೆ ಎಂದು ಆಶಿಸಿದರು.
ತಮ್ಮ ಪ್ರಣಾಳಿಕೆ ಬಗ್ಗೆ ಮಾತನಾಡಿದ ಅವರು, ಅಸ್ಸಾಂನಲ್ಲಿ 15 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ಪ್ರಯೋಜನ ಪಡೆಯುತ್ತವೆ. ಪಕ್ಕಾ ಮನೆ ಪಡೆಯದ ಪ್ರತಿಯೊಂದು ಕುಟುಂಬಕ್ಕೂ ಇದನ್ನು ಒದಗಿಸಲಾಗುವುದು. ಬಡ ಕುಟುಂಬಗಳಿಗೆ ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಭರವಸೆ ನೀಡಿದರು.















