ಬೆಂಗಳೂರು (Bengaluru): ಬಿಜೆಪಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ ಬಿಜೆಪಿಯ ಜನೋತ್ಸವ ಹಾಗೂ ಸಾಧನಾ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರದ್ದುಪಡಿಸಿದ್ದಾರೆ.
ಬುಧವಾರ ಮಧ್ಯರಾತ್ರಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಬೊಮ್ಮಾಯಿ ಅವರು, ಬಿಜೆಪಿಯ ಜನೋತ್ಸವ ಹಾಗೂ ಸಾಧನಾ ಸಮಾವೇಶವನ್ನು ರದ್ದುಗೊಳಿಸುತ್ತಿರುವುದಾಗಿ ತಿಳಿಸಿದರು.
‘ಮನಃಸಾಕ್ಷಿ ಒಪ್ಪಿರಲಿಲ್ಲ. ತುಂಬಾ ತೊಳಲಾಟದಲ್ಲಿದ್ದೆ. ಹಾಗಾಗಿ ಕಾರ್ಯಕ್ರಮ ರದ್ದುಪಡಿಸಲು ನಿರ್ಧರಿಸಿದೆ. ಅತ್ಯಂತ ಅಮಾಯಕ ಯುವಕನ ಕೊಲೆ ಆಗಿದೆ. ಈ ಘಟನೆಯಿಂದ ಮನಸ್ಸಿಗೆ ಶಾಂತಿ ಇರಲಿಲ್ಲ. ಯುವಕನ ತಾಯಿಯ ಆಕ್ರಂದನ ನೋಡಿ ಮನಸ್ಸಿಗೆ ನೋವಾಯಿತು. ಈ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವುದು ಸೂಕ್ತ ಅಲ್ಲ ಎಂಬ ಕಾರಣಕ್ಕಾಗಿ ಜನೋತ್ಸವ ಹಾಗೂ ಸಾಧನಾ ಸಮಾವೇಶ ರದ್ದು ಗೊಳಿಸಲಾಗಿದೆ. ಬದಲಾಗಿ ಕೇವಲ ಪತ್ರಿಕಾಗೋಷ್ಠಿ ಮಾತ್ರ ಇರುತ್ತದೆ ಎಂದರು.
ಹಿಂಸೆಯ ಮೂಲಕ ದ್ವೇಷ ಬಿತ್ತುವ ಹುನ್ನಾರ ಹಿನ್ನೆಲೆಯಲ್ಲಿ ಈ ಕೃತ್ಯವಾಗಿದೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ, ಕೇರಳ, ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ನಡೆದಿದೆ. ಇಂತಹ ಕೃತ್ಯಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು. ಜಾರಿಯಲ್ಲಿರುವ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿಶೇಷವಾಗಿ ಕಾನೂನು ಕ್ರಮ ಜರಗಿಸಲು ಚಿಂತನೆ ಇದೆ ಎಂದರು.
ಉಗ್ರ ನಿಗ್ರಹಕ್ಕಾಗಿ ವಿಶೇಷ ಸ್ಕ್ವಾಡ್ ರಚಿಸಲಾಗುತ್ತದೆ. ಅದರ ಸ್ವರೂಪವನ್ನು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಾಗುತ್ತದೆ ಎಂದರು.