ಬೆಂಗಳೂರೂ : ವಿಧಾನ ಮಂಡಲ ಅಧಿವೇಶನದಲ್ಲಿ ನೆನ್ನೆ (ಗುರುವಾರ) ಉಂಟಾದ ಹೈಡ್ರಾಮಾ ಇಡೀ ರಾಜ್ಯ ಮಾತ್ರವಲ್ಲ ರಾಷ್ಟ್ರವ್ಯಾಪಿ ಸುದ್ದಿಯಾಗುತ್ತಿದೆ. ಒಂದೆಡೆ ರಾಜ್ಯಪಾಲರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದರೆ, ಇತ್ತ ಬಿಜೆಪಿ ಕಾಂಗ್ರೆಸ್ ನಾಯಕರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದೆ.
ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಸಂಪೂರ್ಣವಾಗಿ ಓದಲು ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರು ಗುರುವಾರ ನಿರಾಕರಿಸಿದ್ದು, ಬದಲಿಗೆ ಮೊದಲ ಪ್ಯಾರಾ ಹಾಗೂ ಕೊನೆಯ ಪ್ಯಾರಾ ಮಾತ್ರ ಓದಿ ಕೇವಲ 64 ಸೆಕೆಂಡುಗಳಲ್ಲಿ ಭಾಷಣ ಮುಗಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕರು ಭಾಷಣ ಓದಲೇಬೇಕು ಎಂಬ ಆಗ್ರಹಿಸಿದರು. ಇದನ್ನೂ ಗಮನಿಸಿದ ರಾಜ್ಯಪಾಲರು ಇವೆಲ್ಲವನ್ನೂ ಲೆಕ್ಕಿಸದೆ ಸದನದಿಂದ ಹೊರ ನಡೆಯಲು ಮುಂದಾಗಿದ್ದಾರೆ. ಈ ವೇಳೆ ಬಿಕೆ ಹರಿಪ್ರಸಾದ್ ಸೇರಿದಂತೆ ಅನೇಕ ನಾಯಕರು ರಾಜ್ಯಪಾಲರನ್ನು ಅಡ್ಡಗಟ್ಟಿ ನಿಲ್ಲಿಸೋಕೆ ಮುಂದಾಗಿದ್ದಾರೆ.
ಈ ಹೈಡ್ರಾಮಾದಲ್ಲಿ ತಳ್ಳಾಟ ನೂಕಾಟ ನಡೆದಿದ್ದು, ಬಿಕೆ ಹರಿಪ್ರಸಾದ್ ಅವರ ಬಟ್ಟೆ ಕೂಡ ಹರಿದು ಹೋಗಿತ್ತು, ಇದನ್ನು ಗಮನಿಸಿದ ಬಿಜೆಪಿ ಶಾಸಕರು ಕಾಂಗ್ರೆಸ್ ಶಾಸಕರ ಧೋರಣೆ ಖಂಡಿಸಿ ರಾಜ್ಯಪಾಲರ ರಕ್ಷಣೆಗೆ ಮುಂದಾದರು. ಬಳಿಕ ಮಾರ್ಷಲ್ಗಳು ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರನ್ನು ಬದಿಗೆ ಸರಿಸಿ ರಾಜ್ಯಪಾಲರು ಸುರಕ್ಷಿತವಾಗಿ ಸದನದಿಂದ ಕರೆದೊಯ್ದರು.
ಈ ಘಟನೆಯ ಬಳಿಕ ಕಾಂಗ್ರೆಸ್ ನಾಯಕರು ರಾಜ್ಯಪಾಲರ ವಿರುದ್ಧ ಹಾಗೂ ಬಿಜೆಪಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದೀಗ ಬಿಜೆಪಿ ಹಾಗೂ ಜೆಡಿಎಸ್ ನ ನಾಯಕರು ಸೇರಿ ಕಾಂಗ್ರೆಸ್ ನಾಯಕರಿಗೆ ಪಾಠ ಕಲಿಸಲು ಮುಂದಾಗಿದ್ದು, ರಾಜ್ಯಪಾಲರನ್ನು ಅಡ್ಡಗಟ್ಟಿದ್ದ ಕೈ ನಾಯಕರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ. ಕಾಂಗ್ರೆಸ್ ನಿಂದ ದಲಿತ ರಾಜ್ಯಪಾಲರಿಗೆ ಅಪಮಾನ ಮಾಡಿದ್ದಾರೆ. ಸರ್ಕಾರದ ಸಂಪೂರ್ಣ ಭಾಷಣ ಓದಬೇಕು ಎಂಬ ನಿಯಮವಿಲ್ಲ, ಆದರೆ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಅವಮಾನ ಮಾಡಿದ್ದಾರೆ, ಈ ಕೂಡಲೇ ಕೈ ನಾಯಕರ ಅಮಾನತು ಮಾಡುವಂತೆ ತಿಳಿಸಿದ್ದಾರೆ.
ಈ ಬಗ್ಗೆ ಯುಟಿ ಖಾದರ್, ಬಸವರಾಜ್ ಹೊರಟ್ಟಿ ಅವರಿಗೆ ಕೂಡ ದೋಸ್ತಿ ಶಾಸಕರು ಒತ್ತಾಯಿಸಿದ್ದು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಕೈ ನಾಯಕರ ಅಮಾನತು ಮಾಡುವಂತೆ ಇಂದು ದೋಸ್ತಿ ನಾಯಕರು ಹೋರಾಟ ಮಾಡುವುದಾಗಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಹೆಚ್ ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.















