ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ನವರು ಹತಾಶೆಯ ಅಂತಿಮ ಸ್ಥಿತಿ ತಲುಪಿದ್ದಾರೆ. ಅವರಿಗೆ ಡಾಕ್ಟರ್ ಗಳೇ ಮೇಜರ್ ಆಪರೇಷನ್ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.
ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರ ಜೊತೆ ಅವರು ಬುಧವಾರ ಮಾತನಾಡಿದರು.
ಜಗದೀಶ ಶೆಟ್ಟರ್ ಮತ್ತು ರಮೇಶ ಜಾರಕಿಹೊಳಿ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಎಲ್ಲದರಲ್ಲೂ ಅನುಮಾನಪಡಲು ಆಗಲ್ಲ. ಜಗದೀಶ ಶೆಟ್ಟರ್ ಅವರು, ತಮ್ಮ ಶಕ್ತಿ ಏನಿದೆ ಎಂದು ತೋರಿಸಿದ್ದಾರೆ. ಈ ಬಗ್ಗೆ ನಾನೇನು ಹೆಚ್ಚು ಮಾತನಾಡುವುದಿಲ್ಲ ಎಂದರು. ಬಿಜೆಪಿಯ ತಂಡವೊಂದು ಸರ್ಕಾರ ಬೀಳಿಸಲು ಕೆಲಸ ಮಾಡುತ್ತಿದೆ ಎನ್ನುವ ಬಗ್ಗೆ ಪ್ರತಿಕ್ರಿಯಿಸಿ, ನನಗೆ ಎಲ್ಲ ಗೊತ್ತಿದೆ. ಯಾವ ಶಾಸಕರನ್ನು, ಯಾರು ಯಾವಾಗ ಭೇಟಿ ಮಾಡಿದರು, ಮಾಡುತ್ತಿದ್ದಾರೆ ಎಂದು ಸಂಬಂಧಪಟ್ಟವರೇ ನನಗೆ ಮತ್ತು ಮುಖ್ಯಮಂತ್ರಿಗೆ ಮಾಹಿತಿ ನೀಡುತ್ತಿದ್ದಾರೆ. ಬಿಜೆಪಿಯವರು ಏನು ಆಫರ್ ಕೊಡುತ್ತಿದ್ದಾರೆ ಎನ್ನುವುದನ್ನೂ ಹೇಳಿದ್ದಾರೆ. ನಮ್ಮ ಬಳಿ ಪ್ರತಿಯೊಂದು ಮಾಹಿತಿ ಇದೆ. ಯಾರನ್ನೆಲ್ಲ ಭೇಟಿಯಾಗಿದ್ದಾರೆ ಎಂಬುದನ್ನು ಅಧಿವೇಶನದಲ್ಲಿ ಹೇಳಿಸುತ್ತೇನೆ ಎಂದರು.














