ಮನೆ ರಾಜಕೀಯ ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಬಿಜೆಪಿ-ಜೆಡಿಎಸ್ ಅವರಿಗೆ ಹೊಟ್ಟೆಕಿಚ್ಚು: ದರ್ಶನಾಪುರ

ಸಿದ್ದರಾಮಯ್ಯನವರ ಜನಪ್ರಿಯತೆ ಕಂಡು ಬಿಜೆಪಿ-ಜೆಡಿಎಸ್ ಅವರಿಗೆ ಹೊಟ್ಟೆಕಿಚ್ಚು: ದರ್ಶನಾಪುರ

0

ಯಾದಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು‌ ರಾಜೀನಾಮೆ ಕೊಡುವ ಪ್ರಶ್ನೆ ಬರುವುದಿಲ್ಲ, ಮೂಡಾ ಪರ್ಯಾಯವಾಗಿ ಸ್ಥಳ ಹಂಚಿಕೆ ಮಾಡಿದೆ. ಎಷ್ಟು ಪ್ರತಿಶತ ಜಾಗ ನೀಡಬೇಕೆನ್ನುವುದು ಮುಡಾ ನಿರ್ಧಾರ ಮಾಡಿತ್ತು, ಅದರಂತೆ ಸೈಟ್ ಕೊಟ್ಟಿದ್ದಾರೆ ಅದರಲ್ಲಿ ತಪ್ಪೇನಿದೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.

Join Our Whatsapp Group

ಯಾದಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು‌ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆ ಕುರಿತ ಪ್ರಶ್ನೆಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಡಾ ವಿಷಯದಲ್ಲಿ ಸಿಎಂ ಸಿದ್ದರಾಯಮ್ಮ ಅವರ ಪಾತ್ರ ಎಲ್ಲೂ ಇಲ್ಲ, ಸಿದ್ದರಾಮಯ್ಯನವರ ಹಾಗೂ ಕಾಂಗ್ರೆಸ್ ಪಕ್ಷದ ಜನಪ್ರಿಯತೆ ತಗ್ಗಿಸುವ ಕೆಲಸವನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ ಎಂದರು.

ಈಗ ನೋಡಿ ಸಾಮಾನ್ಯವಾಗಿ ಬಹಳಷ್ಟು ಜನರಿಗೆ ಗಿಫ್ಟ್ ಕೊಟ್ಟಿದ್ದು ವಾಪಸ್ ಕೊಡ್ತಾರೆ ಹಾಗಾದ್ರೆ ವಾಪಸ್ ಕೊಡುವವರು ಕಳ್ಳರ..?, ಸಿಎಂ ಪತ್ನಿಗೆ ನೈತಿಕತೆ ಕಾಡಿದೆ ಅದಕ್ಕೆ ವಾಪಸ್ ಕೊಟ್ಟಿದ್ದಾರೆ ಅದರಲ್ಲೇನಿದೆ. ವಾಪಸ್ ಕೊಟ್ಟಿದ್ದಕ್ಕೆ ಪ್ರಶಂಸೆ ಮಾಡಬೇಕು ಎಂದು ಹೇಳಿದರು.

ಸೈಟ್ ತೆಗೆದುಕೊಂಡಿರುವುದು ತನಿಖೆಯಲ್ಲಿ ಸತ್ಯಾಸತ್ಯತೆ ಗೊತ್ತಾಗುತ್ತದೆ.‌ ಆದರೆ ಬೇಲ್ ಮೇಲೆ ಕುಮಾರಸ್ವಾಮಿ ಇದ್ದಾನೆ ಅವನೇ ದೊಡ್ಡ ಕಳ್ಳ ಅಲ್ವಾ, ಯಡಿಯೂರಪ್ಪ ಬೇಲ್ ಮೇಲೆ ಇದ್ದಾನೆ ಜೈಲಿಗೆ ಬಂದಿಲ್ವಾ ಅವರು ದೊಡ್ಡ ಕಳ್ಳರು ಅಲ್ವಾ, ಜಾಗ ಕೊಟ್ಟವರು ತಪ್ಪಾ, ತೊಗೊಂಡವರದು ತಪ್ಪಾ ಹೇಳಿ, ತನಿಖೆ ನಡಿತಿದೆ, ಎಲ್ಲಾ ಗೊತ್ತಾಗುತ್ತದೆ ಎಂದು ಸಚಿವ ದರ್ಶನಾಪುರ ಅವರು ಖಡಕ್ ಉತ್ತರ ನೀಡಿದರು.

ರಾಜ್ಯ ರಾಜಕಾರಣದಲ್ಲಿ ದೇವರಾಜ ಅರಸ್, ದೇವೆಗೌಡ ಬಿಟ್ಟರೆ ರಾಜ್ಯದಲ್ಲಿ ಅತ್ಯಂತ ಪ್ರಭಾವಿ ರಾಜಕಾರಣಿ ಅಂದ್ರೆ ಸಿದ್ದರಾಮಯ್ಯ ಅವರಾಗಿದ್ದು, ಅವರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಇದೆ ಕಾರಣಕ್ಕೆ ಸರ್ಕಾರವನ್ನ ಅಭದ್ರಗೊಳಿಸೋಕೆ ಬಿಜೆಪಿಯವರು ಯತ್ನಿಸುತ್ತಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಇದ್ದರೂ ಸಹ ರಾಜ್ಯದಲ್ಲಿ ನಾವು ಒಂಬತ್ತು ಸ್ಥಾನ ಗೆದ್ದಿದ್ದೇವೆ ಇದರ ಹೊಟ್ಟೆ ಕಿಚ್ಚು ಬಿಜೆಪಿ-ಜೆಡಿಎಸ್ ನವರಿಗಿದೆ ಎಂದರು.

ಇದೆ ಮೂಡಾದಲ್ಲಿ ಕುಮಾರಸ್ವಾಮಿ ಕುಟುಂಬಸ್ಥರು ಎಷ್ಟು ಜನ ಸೈಟ್ ಪಡೆದಿದ್ದಾರೆ. ಕುಮಾರಸ್ವಾಮಿ ಬೇರೆವರಿಗೆ ಕಳ್ಳರು ಎನ್ನುವ ಮೊದಲು ತಾವು ಏನೆಂದು ನೋಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರಿಗೆ ಸಚಿವ ದರ್ಶನಾಪುರ ಟಾಂಗ್ ನೀಡಿದರು.