ಬೆಂಗಳೂರು: ಆರ್‌ಸಿಬಿ ಗೆಲುವಿನ ನಂತರ ಮೆರವಣಿಗೆ ನಡೆಸಲು ಅವಕಾಶ ನೀಡಬೇಕು ಎಂದು ಮೊದಲಿಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒತ್ತಾಯಿಸಿದ್ದರು. ಆದರೆ ಈಗ ಅವರು ತಮ್ಮ ನಿಲುವು ಬದಲಾಯಿಸಿದ್ದಾರೆ. ಬಿಜೆಪಿ ಯೂ ಟರ್ನ್ ಮಾಡುವುದು ಹೊಸದೇನಲ್ಲ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಇಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಬಿಜೆಪಿಯವರು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಆದರೆ ಇವರುಗಳೇ ಮೊದಲಿಗೆ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಕೇಳಿದ್ದರು. ಈಗ ಅವರ ನಿಲುವು ಬದಲಾಗಿದೆ” ಎಂದು ಹೇಳಿದರು.
“ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಕ್ರೀಡಾಭಿಮಾನಿಗಳಿಗೆ ಅವಕಾಶ ನೀಡದೆ ಅವಮಾನ ಮಾಡುತ್ತಿದ್ದೀರಿ ಎಂದು ಬಿಜೆಪಿ ನಾಯಕರೇ ಟ್ವೀಟ್ ಮಾಡಿದ್ದರು. ಆದರೆ ಅವರು ಈಗ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ತಂತ್ರ ಜನರಿಗೆ ಅರ್ಥವಾಗುವಂತಿದೆ. ಬಿಜೆಪಿ ಆಡಳಿತದಲ್ಲಿದ್ದ ರಾಜ್ಯಗಳಲ್ಲಿ ಸಂಭವಿಸಿದ ದುರಂತಗಳ ಪಟ್ಟಿ ಕೊಟ್ಟರೆ ನೈತಿಕತೆ ಇರುವವರಾದರೆ ಮೊದಲು ಅವರೇ ರಾಜೀನಾಮೆ ನೀಡಬೇಕು” ಎಂದು ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ತಿಳಿಸಿದ್ದಾರೆ.
ಮುಂಬೈ ಭೀಕರ ದಾಳಿಯ ಬಳಿಕ ಪ್ರಧಾನಿ ಮನಮೋಹನ್ ಸಿಂಗ್ ರಾಜೀನಾಮೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಆ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ಮುಖ್ ರಾಜೀನಾಮೆ ನೀಡಿದ್ದರು. ಆದರೆ ಕುಮಾರಸ್ವಾಮಿ ಈ ಸಂಗತಿಯನ್ನು ಮರೆತುಬಿಟ್ಟಿದ್ದಾರೆ. ಅವರು ದಿನವೂ ಡಿಕೆ ಶಿವಕುಮಾರ್ ಅವರನ್ನು ಟೀಕಿಸುತ್ತಿದ್ದಾರೆ. ಅವರ ಆರೋಗ್ಯದ ಕಡೆ ಗಮನ ಹರಿಸಿ ಜನಸೇವೆಯಲ್ಲಿ ತೊಡಗಲಿ” ಎಂದು ಚಾಟಿ ನೀಡಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್‌ಐಎಗೆ ವಹಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ನಮ್ಮ ರಾಜ್ಯದ ಪೊಲೀಸರು ಸಮರ್ಥರು. ಇತ್ತೀಚೆಗೆ ಸಿಬಿಐಗೆ ವಹಿಸಿದ ಹಲವು ಪ್ರಕರಣಗಳಲ್ಲಿ ಫಲಿತಾಂಶವೇನು ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕರಾವಳಿಯಲ್ಲಿ ವಿಷಬೀಜ ಬಿತ್ತುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಇದು ಸರಿಯಲ್ಲ” ಎಂದು ಟೀಕಿಸಿದರು.
ಡಿಕೆ ಶಿವಕುಮಾರ್ ದೆಹಲಿಗೆ ತೆರಳಿರುವ ಬಗ್ಗೆ ಹರಿದಾಡುತ್ತಿರುವ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, “ಇದು ಸುಳ್ಳು. ಬೆಂಗಳೂರಿನ ಕಸ ವಿಲೇವಾರಿ ಸಂಬಂಧ ಹೊಸ ತಂತ್ರಜ್ಞಾನ ಅಧ್ಯಯನಕ್ಕಾಗಿ ಬಿಬಿಎಂಪಿಯ 15 ಅಧಿಕಾರಿಗಳ ತಂಡದೊಂದಿಗೆ ಅವರು ದೆಹಲಿಗೆ ತೆರಳಿದ್ದಾರೆ. ರಸ್ತೆ ಅಭಿವೃದ್ಧಿ ಕುರಿತು ಚರ್ಚೆ ನಡೆಯಲಿದೆ. ಹೈಕಮಾಂಡ್ ಕರೆ ನೀಡಿಲ್ಲ. ಅವರು ಪಕ್ಷದ ಅಧ್ಯಕ್ಷರಾಗಿ ಹಲವು ವಿಷಯಗಳಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ” ಎಂದು ಸ್ಪಷ್ಟಪಡಿಸಿದರು.
“ತುಮಕೂರನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಲು ಪರಮೇಶ್ವರ್ ಹೇಳಿದ್ದಾರೆ. ಅದು ಸರ್ಕಾರದ ತೀರ್ಮಾನ. ಅವರು ಹಿರಿಯ ಸಚಿವರು. ಇಂಥ ತೀರ್ಮಾನಗಳನ್ನು ನಾವು ಸ್ವಾಗತಿಸುತ್ತೇವೆ” ಎಂದರು.
ಅಂತಿಮವಾಗಿ, ನಾಮನಿರ್ದೇಶಿತ ವಿಧಾನಪರಿಷತ್ ಸದಸ್ಯರ ಪಟ್ಟಿಯನ್ನು ಎಐಸಿಸಿ ತಡೆ ಹಿಡಿದಿದೆ ಎನ್ನುವ ಬಗ್ಗೆ ಕೇಳಿದಾಗ, “ನನಗೆ ಇದರ ಬಗ್ಗೆ ಮಾಹಿತಿಯಿಲ್ಲ. ಎಐಸಿಸಿ ವಿಚಾರ ನನಗೆ ಗೊತ್ತಿಲ್ಲ. ಪಕ್ಷದ ಹಿರಿಯ ಮುಖಂಡರು ಇದನ್ನು ಗಮನಿಸುತ್ತಾರೆ” ಎಂದರು.














