ತಿರುವನಂತಪುರಂ: ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಹಾಗೂ ನಟ ಜಿ. ಕೃಷ್ಣಕುಮಾರ್ ಮತ್ತು ಅವರ ಪುತ್ರಿ ದಿಯಾ ವಿರುದ್ಧ ತೀವ್ರ ಗಂಭೀರ ಸ್ವರೂಪದ ಆರ್ಥಿಕ ಸುಲಿಗೆ ಪ್ರಕರಣ ದಾಖಲಾಗಿದ್ದು, ಮ್ಯೂಸಿಯಂ ಠಾಣೆ ಪೊಲೀಸರು ತನಿಖೆ ಚುರುಕು ಮಾಡಿದ್ದಾರೆ.
ಆಭರಣ ಮಳಿಗೆಯ ಮಾಲೀಕರಾಗಿರುವ ತಂದೆ ಹಾಗೂ ಮಗಳ ವಿರುದ್ಧ ಅಪಹರಣ, ಕಿರುಕುಳ ಹಾಗೂ ಸುಲಿಗೆ ಪ್ರಕರಣ ದಾಖಲಾಗಿದ್ದು, ಮೂವರು ಮಾಜಿ ಉದ್ಯೋಗಿಗಳು ಸುಮಾರು 69 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾರೆ ಎನ್ನುವುದು ಬಿಜೆಪಿ ಮುಖಂಡನ ಹೇಳಿಕೆ. ದಿಯಾ ಅನುಪಸ್ಥಿತಿಯಲ್ಲಿ ಆಭರಣ ಮಳಿಗೆಯ ಸಿಬ್ಬಂದಿ ಸಂಸ್ಥೆಯ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಕ್ಯೂಆರ್ ಕೋಡ್ ಬದಲಿಸಿ ಬೇರೆ ಕ್ಯೂಆರ್ ಕೊಡ್ ಇರಿಸಿ ತಮ್ಮ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆಯಾಗುವಂತೆ ಮಾಡಿದ್ದರು ಎನ್ನುವುದು ಕೃಷ್ಣಕುಮಾರ್ ವಾದ.
ಈ ಆರೋಪಗಳ ನಡುವೆ, ಆರೋಪಿತರಾದ ಮಾಜಿ ಸಿಬ್ಬಂದಿ ವಾದಕ್ಕೆ ಅನುಸಾರ, ದಿಯಾ ಅವರ ಸೂಚನೆಯ ಮೇರೆಗೆ ತಮ್ಮ ವೈಯಕ್ತಿಕ ಖಾತೆಗಳನ್ನು ವಾಣಿಜ್ಯ ವಹಿವಾಟುಗಳಿಗೆ ಬಳಸಲಾಗಿದೆ. ಅವರು ತಮ್ಮ ವಿರುದ್ಧ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ಪ್ರತಿದೂರು ನೀಡಿದ್ದಾರೆ. ಈ ಅಂಶವು ತನಿಖೆಯಲ್ಲಿ ಹೊಸ ತಿರುವು ತಂದಿದೆ.
ವಾಸ್ತವ ಬಯಲುಗೊಳಿಸಲು ಪ್ರಕರಣದಲ್ಲಿ ಷಾಮೀಲಾದ ಎಲ್ಲರ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಕೆಲ ಅನುಮಾನಾಸ್ಪದ ವಹಿವಾಟುಗಳು ಆರಂಭಿಕ ತನಿಖೆಯ ವೇಳೆ ಗಮನಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ. ಆರೋಪಿಗಳ ಚಲನ ವಲನಗಳನ್ನು ಪತ್ತೆ ಮಾಡಲು ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡಾ ಪರಿಶೀಲಿಸಲಾಗುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದ್ದು, ನಿಜಾಂಶ ಬಯಲಾಗುವ ನಿರೀಕ್ಷೆ ಇದೆ. ಹಣಕಾಸು ದಂಧೆ, ಅಧಿಕಾರ ದುರುಪಯೋಗ ಹಾಗೂ ಕಾನೂನು ಬಾಹಿರ ವಹಿವಾಟುಗಳು ಆರೋಪಗಳ ಮಧ್ಯೆ ಇದೊಂದು ಸ್ಪಷ್ಟ ಚಿತ್ರಣಕ್ಕೆ ಬರಬೇಕಿದೆ.














