ಕಲಬುರಗಿ: ನಗರದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನು ಪೋಲಿಸರು ಮತ್ತೆ ವಶಕ್ಕೆ ಪಡೆದಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬುಧವಾರ ಮಣಿಕಂಠ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದು ಅದಕ್ಕೆ ಆತನೇ ಕಥಾನಾಯಕ ಎಂದು ಸಾಕ್ಷಿಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಮೂಲಕ ನಾಟಕ ಬಯಲು ಮಾಡಿದ್ದರು.
ಅಲ್ಲದೆ ಸಚಿವ ಪ್ರಿಯಾಂಕ್ ಖರ್ಗೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಮಾಡಿ ಮಣಿಕಂಠನ ಹಲ್ಲೆ ಡ್ರಾಮಾ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಈ ಕುರಿತು ಸಾಕ್ಷ್ಯಗಳಿವೆ. ಬಿಜೆಪಿ ನಾಯಕರು ಇದನ್ನೆಲ್ಲಾ ಬೆಂಬಲಿಸಿದ್ದರು. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.
ಗುರುವಾರ ಹಲ್ಲೆಯ ಕುರಿತು ಸುದ್ದಿಗೋಷ್ಠಿ ಮಾಡಿ ನಿಜವಾದ ಬಣ್ಣ ಬಯಲು ಮಾಡುವುದಾಗಿ, ಪೊಲೀಸರ ತನಿಖೆಯ ನಿಜಾಂಶ ಬಯಲು ಮಾಡಲು ಮುಂದಾಗಿದ್ದರು. ಪೊಲೀಸರು ಬೆಳಗ್ಗೆ ಪತ್ರಿಕಾ ಭವನದಲ್ಲಿ ಪಹರೆ ಹಾಕಿದ್ದರು. ಇದನ್ನು ಅರಿತು ಪತ್ರಿಕಾಗೋಷ್ಠಿಯ ಸ್ಥಳ ಬದಲಿಸಿದ್ದ ಮಣಿಕಂಠನನ್ನು ಆತನ ಭಾರತ್ ಪ್ರೈಡ್ ಅಪಾರ್ಟ್ಮೆಂಟ್ ನಲ್ಲಿ ಸುದ್ದಿಗೋಷ್ಠಿ ಮಾಡಲು ತಯಾರಿ ಮಾಡುತ್ತಿದ್ದಾಗಲೇ ಚೌಕ್ ಪೊಲೀಸ್ ಠಾಣೆಯ ಸಿಪಿಐ ನೇತೃತ್ವದ ತಂಡ ಬಂಧಿಸಿ ಕರೆದೊಯ್ದಿದೆ ಎಂದು ಮೂಲಗಳು ತಿಳಿಸಿವೆ.