ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸನ್ ಅವರನ್ನು ಹತ್ಯೆಗೈದ ಆರೋಪದ ಮೇಲೆ 15 ಮಂದಿ ಪಿಎಫ್ ಐ ಸದಸ್ಯರಿಗೆ ಕೇರಳ ನ್ಯಾಯಾಲಯ ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.
2021 ರ ಡಿಸೆಂಬರ್‌ನಲ್ಲಿ ಅಲಪ್ಪುಳ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಒಬಿಸಿ ವಿಭಾಗದ ನಾಯಕ ರಂಜಿತ್ ಶ್ರೀನಿವಾಸನ್ ಅವರ ಹತ್ಯೆಗೆ ಸಂಬಂಧಿಸಿದಂತೆ ಈಗ ನಿಷೇಧಿತ ಇಸ್ಲಾಂ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ದೊಂದಿಗೆ ಸಂಬಂಧ ಹೊಂದಿರುವ 15 ಮಂದಿಗೆ ಕೇರಳ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಿ ಶ್ರೀದೇವಿ ಅವರು ಈ ಶಿಕ್ಷೆ ವಿಧಿಸಿದ್ದಾರೆ.
ಪ್ರಾಸಿಕ್ಯೂಷನ್ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ನೀಡಬೇಕೆಂದು ಕೋರಿತ್ತು. ವ್ಯಕ್ತಿಯನ್ನು ಮಗು, ಹೆಂಡತಿ ಮುಂದೆಯೇ ಹತ್ಯೆಗೈಯಲಾಗಿತ್ತು.
ಕೇರಳದಲ್ಲಿ ಇದೇ ಮೊದಲ ಬಾರಿಗೆ ಒಂದೇ ಪ್ರಕರಣದಲ್ಲಿ ಇಷ್ಟು ಮಂದಿಗೆ ಮರಣದಂಡನೆ ವಿಧಿಸಲಾಗಿದೆ. ಜನವರಿ 20 ರಂದು, ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಈ ಪ್ರಕರಣದಲ್ಲಿ ಪಿಎಫ್ ಐ-ಎಸ್ ಡಿಪಿಐಗೆ ನಂಟು ಹೊಂದಿರುವ 15 ಜನರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ನ್ಯಾಯಾಲಯ ಇಂದು ಶಿಕ್ಷೆಯನ್ನು ಪ್ರಕಟಿಸಿದೆ.
ಮೊದಲ ಎಂಟು ಆರೋಪಿಗಳ ವಿರುದ್ಧ ಕೊಲೆಯ ಅಪರಾಧ ಸಾಬೀತಾಗಿದೆ ಮತ್ತು ಇತರ ಆರೋಪಿಗಳು ಕ್ರಿಮಿನಲ್ ಪಿತೂರಿಯಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯವು ಕಂಡುಹಿಡಿದಿದೆ.
ನಿಜಾಮ್, ಅಜ್ಮಲ್, ಅನೂಪ್, ಎಂಡಿ ಅಸ್ಲಾಂ, ಸಲಾಂ, ಅಬ್ದುಲ್ ಕಲಾಂ, ಸಫರುದ್ದೀನ್, ಮುನ್ಶಾದ್, ಜಜೀಬ್, ನವಾಜ್, ಶೆಮೀರ್, ನಜೀರ್, ಜಾಕೀರ್ ಹುಸೇನ್, ಶಾಜಿ, ಶಮ್ನಾಜ್ ಶಿಕ್ಷೆಗೊಳಗಾದವರು.
2021 ರ ಡಿಸೆಂಬರ್ 19ರಂದು ಬೆಳಗ್ಗೆ, ಬಿಜೆಪಿ ಒಬಿಸಿ ಮೋರ್ಚಾದ ನಾಯಕರಾಗಿದ್ದ ವಕೀಲ ರಂಜಿತ್ ಶ್ರೀನಿವಾಸನ್ ಅವರನ್ನು ಎಸ್‌ಡಿಪಿಐ ಹತ್ಯೆ ಮಾಡಿದ ಕೆಲವೇ ಗಂಟೆಗಳ ನಂತರ ಅಲಪ್ಪುಳದ ಅವರ ಮನೆಯಲ್ಲಿ ಕುಟುಂಬ ಸದಸ್ಯರ ಎದುರೇ ಹತ್ಯೆಮಾಡಲಾಗಿತ್ತು.