ಜೈಪುರ್ : ಉದಯಪುರದ ಅಂಬೆರಿ ಬಳಿ ಉದಯಪುರ-ರಾಜ್ಸಮಂದ್ ಹೆದ್ದಾರಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ರಾಜಸ್ಥಾನದ ರಾಜಸಮಂದ್‌ನ ಬಿಜೆಪಿ ಶಾಸಕಿ ದೀಪ್ತಿ ಕಿರಣ್ ಮಹೇಶ್ವರಿ ಅವರ ಪಕ್ಕೆಲಬು ಮುರಿತವಾಗಿದೆ. ಈ ಅಪಘಾತದಲ್ಲಿ ಅವರ ಆಪ್ತ ಸಹಾಯಕ ಮತ್ತು ಚಾಲಕ ಸಹ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನೆನ್ನೆ (ಶನಿವಾರ) ಅಪಘಾತ ಸಂಭವಿಸಿದ್ದು, ರಾಜಸಮಂದ್‌ನಿಂದ ಬರುತ್ತಿದ್ದ, ಮಹೇಶ್ವರಿ ಅವರ ಕಾರು ಅಂಬೆರಿ ಬಳಿ ಗುಜರಾತ್ ನೋಂದಾಯಿತ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಶಾಸಕಿಗೆ ಪಕ್ಕೆಲಬು ಮುರಿದಿದೆ. ಅವರ ಆಪ್ತ ಸಹಾಯಕ ಜೈ ಮತ್ತು ಚಾಲಕ ಧರ್ಮೇಂದ್ರ ಸಹ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಉದಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಜರಾತ್ ನೋಂದಾಯಿತ ವಾಹನದಲ್ಲಿ ಪ್ರಯಾಣಿಸುತ್ತಿದ್ದ, ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.















