ಮನೆ ರಾಜ್ಯ ಗ್ಯಾರಂಟಿ ಯೋಜನೆಗೆ ಪರಿಶಿಷ್ಟರ ಮೀಸಲು ಹಣ ದುರ್ಬಳಕೆ ವಿರುದ್ಧ ಬಿಜೆಪಿ ಪ್ರತಿಭಟನೆ

ಗ್ಯಾರಂಟಿ ಯೋಜನೆಗೆ ಪರಿಶಿಷ್ಟರ ಮೀಸಲು ಹಣ ದುರ್ಬಳಕೆ ವಿರುದ್ಧ ಬಿಜೆಪಿ ಪ್ರತಿಭಟನೆ

0

ಮಂಡ್ಯ:ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಮೀಸಲು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷದ ಎಸ್ಸಿ ಮೋರ್ಚಾ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು.
ಜೈ ಶ್ರೀ ರಾಮ್,ಜೈ ಭೀಮ್ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಜಯ ಘೋಷ ಮೊಳಗಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,ಸಚಿವರಾದ ಜಿ. ಪರಮೇಶ್ವರ್, ಎಚ್.ಸಿ. ಮಹದೇವಪ್ಪ,ಪ್ರಿಯಾಂಕ ಖರ್ಗೆ ದಲಿತ ವಿರೋಧಿಯಾಗಿದ್ದಾರೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ್ದ ಎಸ್ಸಿಎಸ್ ಪಿ ಮತ್ತು ಟಿಎಸ್ಪಿ ಅನುದಾನದಲ್ಲಿ 11,114 ಕೋಟಿ ಹಣವನ್ನು ಐದು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿರುವುದಾಗಿ ಕಾಂಗ್ರೆಸ್ ಸರ್ಕಾರ ಲಿಖಿತ ರೂಪದಲ್ಲಿ ನೀಡಿದೆ,ಅದೇ ರೀತಿ ಸಚಿವರು ಗ್ಯಾರಂಟಿ ಯೋಜನೆಯಲ್ಲೆ ಪರಿಶಿಷ್ಟರಿಗೆ ಮೀಸಲಿರಿಸಿದ್ದ ಹಣವನ್ನು ಪರಿಶಿಷ್ಟರಿಗೆ ನೀಡುವ ಮಾತು ಆಡಿದ್ದಾರೆ,ಮತ್ತೊಂದೆಡೆ ಗ್ಯಾರಂಟಿ ಫಲಾನುಭವಿಗಳಲ್ಲಿ ಪರಿಶಿಷ್ಟರನ್ನು ಗುರುತಿಸುವ ಕೆಲಸ ಮಾಡಿಲ್ಲ ಎಂಬ ಹೇಳಿಕೆ ಸರ್ಕಾರದಿಂದ ಹೊರ ಬಿದ್ದಿದೆ, ಇಂತಹ ನಡೆ ಸಂವಿಧಾನ ವಿರೋಧಿಯಾಗಿದೆ,ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟು ಹಣವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿರುವುದು ಎಸ್.ಸಿಪಿ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ದೂರಿದರು.
ಪರಿಶಿಷ್ಟ ಸಮುದಾಯಕ್ಕೆ ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಕಿತ್ತುಕೊಂಡಿರುವ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ,ದಲಿತರಿಗೆ ಮಾಡಿರುವ ದ್ರೋಹ ಇದಾಗಿದ್ದು, ಈ ಕೂಡಲೇ ಗ್ಯಾರೆಂಟಿ ಯೋಜನೆಗೆ ವರ್ಗಾವಣೆ ಮಾಡಿರುವ ಹಣವನ್ನು ವಾಪಸ್ ಪಡೆದು ಪರಿಶಿಷ್ಟ ಕಲ್ಯಾಣ ಕಾರ್ಯಕ್ರಮಗಳಾದ ಗಂಗಾಕಲ್ಯಾಣ ಮತ್ತು ವಸತಿ ಶಾಲೆಗಳ ಭೂಮಿ ಖರೀದಿ ಮಾಡಲು ಬಳಸಬೇಕು ಎಂದು ಆಗ್ರಹಿಸಿದರು.
ವಿಧಾನಸಭೆಯ ಮೀಸಲು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಶಾಸಕರಾಗಿರುವವರೂ ಮುಖ್ಯಮಂತ್ರಿಗಳ ಪರಿಶಿಷ್ಟ ವಿರೋಧಿ ನಡೆಯನ್ನು ಖಂಡಿಸದಿರುವುದು ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ನಡೆಗೆ ಸಾಕ್ಷಿಯಾಗಿದೆ,ರಾಜ್ಯಪಾಲರು ಮಧ್ಯ ಪ್ರವೇಶಿಸಿ ಪರಿಶಿಷ್ಟ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಡಾ.ಎನ್. ಎಸ್.ಇಂದ್ರೇಶ್,ಉಪಾಧ್ಯಕ್ಷ ಟಿ.ಶ್ರೀಧರ್,ಜಿ.ಮುನಿರಾಜು, ಡಾ.ಸಿದ್ದರಾಮಯ್ಯ,ಕೆ.ಎಸ್. ನಂಜುಂಡೇಗೌಡ, ಅಶೋಕ್ ಜಯರಾಮ್. ಎಸ್.ಮಲ್ಲೇಶ್,ನಿತ್ಯಾನಂದ, ಸಿ.ಟಿ.ಮಂಜುನಾಥ್,ಶಿವಲಿಂಗಯ್ಯ, ಸಿದ್ದರಾಜುಗೌಡ,ಉದಯ ಕುಮಾರ್,ಎನ್.ವಸಂತ್ ಕುಮಾರ್,ಲೋಕೇಶ್, ಲಲಿತಾ, ವಿಜಯಕುಮಾರಿ, ಬೋರಯ್ಯ,ನೇತೃತ್ವ ವಹಿಸಿದ್ದರು.

ಹಿಂದಿನ ಲೇಖನಮಾರ್ಚ್​ 15ಕ್ಕೆ ‘ಕೆರೆಬೇಟೆ’ ಸಿನಿಮಾ ಬಿಡುಗಡೆ
ಮುಂದಿನ ಲೇಖನಪತಿ ಸಾರ್ವಜನಿಕವಾಗಿ ಪತ್ನಿಯ ಕಪಾಳಕ್ಕೆ ಹೊಡೆಯುವುದು ಐಪಿಸಿ 354 ಅಡಿ ಅಪರಾಧವಲ್ಲ: ಹೈಕೋರ್ಟ್