ಮೈಸೂರು: ಈ ಭಾಗದ ಜನ ಸಾಮಾನ್ಯರಲ್ಲಿ ಮೋದಿ ಹಾಗೂ ಬಿಜೆಪಿ ಪರವಾದ ಒಲವಿದೆ. ನಾವು ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದ್ದೇವೆ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಲಜೀವನ್ ಮಿಷನ್ ಅಡಿ 20 ತಿಂಗಳ ಒಳಗಾಗಿ ಕಬಿನಿ ಮತ್ತು ಕಾವೇರಿಯ ಮೂಲಕ ನಗರದ ಪ್ರತೀ ಮನೆಗೂ ಶುದ್ದ ನೀರು ಪೂರೈಸಲಿದ್ದೇವೆ ಎಂದು ಭರವಸೆ ನೀಡಿದರು.
ಡಬಲ್ ಎಂಜಿನ್ ಸರ್ಕಾರದ ಮೂಲಕ ಕರ್ನಾಟಕದ ವಿಕಾಸವಾಗಿದೆ. ಯುಪಿಎ ಸರ್ಕಾರದ ವೇಳೆ ಸಾಧ್ಯವಾಗದ, ಮನೆಗೆ ವಿದ್ಯುದೀಕರಣದ ಯೋಜನೆಯನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಿದೆ. ಕರ್ನಾಟಕಕ್ಕೆ 7 8,300 ಕೋಟಿ ಅನುದಾನ ನೀಡಿದೆ ಎಂದರು.
ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆ, ವಾಹನ ದಟ್ಟಣೆ ತಪ್ಪಿಸಲು ವರ್ತುಲ ರಸ್ತೆಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು. ಇವು ಸಾಕಾರಗೊಳ್ಳಲು ಬಿಜೆಪಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಮತ್ತೆ ಡಬಲ್ ಎಂಜಿನ್ ಸರ್ಕಾರಕ್ಕೆ ಅವಕಾಶ ಕೊಡಿ ಎಂದು ಕೋರಿದರು.
ಸಂಸದ ಪ್ರತಾಪ ಸಿಂಹ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಮಾನ ನಿಲ್ದಾಣ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಿಸಲು ಯೋಜನೆ ಸಿದ್ಧವಾಗಿದ್ದು, ಚುನಾವಣೆಯ ನಂತರ ಘೋಷಿಸಲಾಗುವುದು. ಮೈಸೂರಿನ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೊಡೆದಾಟ ಬಡಿದಾಟಗಳನ್ನಷ್ಟೇ ಕಾಣಲು ಸಾಧ್ಯ ಎಂದರು.
ಶಾಸಕ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್ ಇದ್ದರು.