ಬೆಂಗಳೂರು: ಬಿಜೆಪಿಗೆ ಬಹುಮತ ಬರುತ್ತದೆ. ಈ ಬಾರಿ ನಾವು ಸರ್ಕಾರ ರಚಿಸುತ್ತೇವೆ. ಈ ಬಾರಿ ನಮ್ಮ ಕಾರ್ಯಕರ್ತ ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ತಾವು ಮುಖ್ಯಮಂತ್ರಿಯಾಗುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಸ್ಥಾನದ ವಿಚಾರ ಬಂದಾಗ ನಾನು ರಾಜ್ಯಕ್ಕೆ ಬರುವ ಪ್ರಶ್ನೆ ಇಲ್ಲ. ನನಗೆ ಮೋದಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಅಲ್ಲೇ ಖುಷಿಯಾಗಿ ಇದ್ದೇನೆ. ಮತಗಟ್ಟೆ ಸಮೀಕ್ಷೆ ಸುಳ್ಳಾಗುತ್ತದೆ. ನಾವು ಬಹುಮತದ ಸರ್ಕಾರ ಮಾಡುವ ವಿಶ್ವಾಸ ಇದ್ದು, ಬೂತ್ ಮಟ್ಟದ ಕಾರ್ಯಕರ್ತರ ವರದಿ ಪ್ರಕಾರ 120 ಕ್ಕೂ ಹೆಚ್ಚು ಸೀಟುಗಳಲ್ಲಿ ಮುಂದೆ ಇದ್ದೇವೆ. ಪ್ರಧಾನಿ ಮೋದಿ ರೋಡ್ ಶೋ ಮತದಾರರ ಮೇಲೆ ಪರಿಣಾಮ ಆಗಿದೆ ಎಂದಿದ್ದಾರೆ.
ಇದೆ ಸಂದರ್ಭದಲ್ಲಿ ಮತಗಟ್ಟೆ ಸಮೀಕ್ಷೆ ಬಳಿಕ ಸಿದ್ದರಾಮಯ್ಯ ಜೊತೆ ಸುರ್ಜೇವಾಲಾ ಚರ್ಚೆ ವಿಚಾರ ‘ ಕಳೆದ ಬಾರಿ ಕೂಡ ಅವರು ಹೊಸ ಕೋಟು ಹೊಲಿಸಿಕೊಂಡಿದ್ದರು. ಆದರೆ ಹಿಂಬಾಗಿಲಿನಿಂದ ಕುಮಾರಸ್ವಾಮಿ ಸಿಎಂ ಆಗಿದ್ದರು. ನಮ್ಮ ವರದಿ ಪ್ರಕಾರ ಬಿಜೆಪಿಗೆ 120-125 ಸ್ಥಾನ ಬರುತ್ತದೆ. ಸ್ವಂತ ಬಲದಲ್ಲಿ ನಾವೇ ಸರ್ಕಾರ ರಚನೆ ಮಾಡ್ತೇವೆ. ಜನ ಎಕ್ಸಿಟ್ ಪೋಲ್ ಸುಳ್ಳು ಮಾಡ್ತಾರೆಂದು ಮೊದಲೇ ಹೇಳಿದ್ದೆ. ಈಗಲೂ ನನಗೆ ಅದೇ ವಿಶ್ವಾಸವಿದೆ. ಬಿ.ಎಸ್.ಯಡಿಯೂರಪ್ಪನವರ ವರದಿ ಯಾವತ್ತೂ ಸುಳ್ಳಾಗಿಲ್ಲ. ಬೆಂಗಳೂರಿನಲ್ಲಿ 53% ಮಾತ್ರ ಮತದಾನವಾಗಿದ್ದು ಬೇಸರವಾಗಿದೆ. ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದ್ದರೂ ಮತ ಹಾಕಿಲ್ಲ. ಮುಂದೆ ಆದರೂ ಬೆಂಗಳೂರಿನ ಜನ ಮತ ಹಾಕಲು ಬರಲಿ ಎಂದರು.
ಯಾವುದೇ ರೀತಿಯ ಆಪರೇಷನ್ ಕಮಲ ಮಾಡುವ ಪರಿಸ್ಥಿತಿ ನಮಗೆ ಬರಲ್ಲ. ಬಹುಮತದ ಸರ್ಕಾರ ಬರುತ್ತದೆ. ಕಳೆದ ಬಾರಿ ನಮಗೆ 104 ಸೀಟು ಬಂದಿತ್ತು. ಆಗ ನಾಯಿ ನರಿಗಳಂತೆ ಕಿತ್ತಾಡುತ್ತಿದ್ದವರು ಒಟ್ಟಾದರು ಎಂದರು.
ವರುಣಾದಲ್ಲಿ ಸಿದ್ದರಾಮಯ್ಯ ಸೋಲುತ್ತಾರೋ ಗೊತ್ತಿಲ್ಲ, ವರುಣಾದ ಜನತೆ ಹೇಳಬೇಕು. ಸೋಮಣ್ಣ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದು, ಸಿದ್ದರಾಮಯ್ಯನವರನ್ನ ಕಟ್ಟಿ ಹಾಕುವ ಕೆಲಸ ಮಾಡಿದ್ದಾರೆ. ಬೆಂಗಳೂರು ಮೋದಿ ರೋಡ್ ಶೋ ಪರಿಣಾಮ ಆಗಿದೆ, ಅದಕ್ಕಾಗಿ ನಾವು ಇಷ್ಟು ನಿರೀಕ್ಷೆ ಮಾಡಿದ್ದೇವೆ ಎಂದಿದ್ದಾರೆ.