ಮೈಸೂರು: ಹಳೆ ಮೈಸೂರು ಭಾಗದಲ್ಲೂ ಬಿಜೆಪಿ ಸದೃಢವಾಗಿದೆ. 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಬಿಜೆಪಿ ರಾಜ್ಯ ಉಸ್ತುವಾರಿಯೂ ಆದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರಕ್ಕಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಶೇ 40 ಕಮಿಷನ್ ಸರ್ಕಾರವೆಂದು ಟೀಕಿಸುತ್ತಿದೆ. ಅವೆಲ್ಲ ಆಧಾರರಹಿತ ಎಂದು ಹೇಳಿದರು.
ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯವನ್ನು ಬಿಜೆಪಿ ನೀಡಿದೆ. ಅದನ್ನು ಕಾಂಗ್ರೆಸ್ ಗೆ ಸಹಿಸಲಾಗುತ್ತಿಲ್ಲ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರಪ್ರದೇಶದಲ್ಲೂ ಪ್ರಚಾರ ನಡೆಸಿದ್ದರು. ಆದರೆ, ಅಲ್ಲಿ ಸಿಕ್ಕಿದ್ದು ಒಂದು ಸ್ಥಾನ ಮಾತ್ರ ಎಂದು ತಿಳಿಸಿದರು.
ರಾಜ್ಯದಲ್ಲಿ ಅಭಿವೃದ್ಧಿಯು ಮುಂದವರಿಯಲು ಹಾಗೂ ಜನರ ಹಿತಕ್ಕಾಗಿ ಡಬಲ್ ಎಂಜಿನ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರಗಳು ಹೆಮ್ಮೆಯೆನಿಸುವ ಅಭಿವೃದ್ಧಿ ಕೆಲಸಗಳನ್ನು ಮಾಡಿವೆ ಎಂದು ಹೇಳಿದರು.
ದೇಶದ ಇತಿಹಾಸದಲ್ಲಿ ಈ ಮಾದರಿ ಅಭಿವೃದ್ಧಿಯನ್ನು ಕಂಡಿರಲಿಲ್ಲ. ಸಂಘಟನಾಧರಿತ ಪಕ್ಷವಾಗಿದೆ. ಹೀಗಾಗಿಯೇ, ಈ ಬಾರಿ ಹೊಸಮುಖಗಳಿಗೆ ಹೆಚ್ಚು ಟಿಕೆಟ್ ನೀಡಿದೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಸ್.ಎ.ರಾಮದಾಸ್ ಅವರ ಬದಲು ಸಾಮಾನ್ಯ ಕಾರ್ಯಕರ್ತ ಟಿ.ಎಸ್.ಶ್ರೀವತ್ಸ ಅವರಿಗೆ ಟಿಕೆಟ್ ನೀಡಿದೆ. ರಾಮದಾಸ್ ಕಾರ್ಯಕರ್ತರ ಗೆಲುವಿಗಾಗಿ ಪಕ್ಷದ ಸಂಘಟನೆ ಹಾಗೂ ಪ್ರಚಾರದಲ್ಲಿ ತೊಡಗಿದ್ದಾರೆ. ಅವರ ಸಂಕಲ್ಪಕ್ಕೆ ಅಭಾರಿಯಾಗಿದ್ದೇವೆ. ಇದು ಪಕ್ಷದ ಶಿಸ್ತು ಹಾಗೂ ಬದ್ಧತೆಯನ್ನು ತೋರಿಸುತ್ತದೆ ಎಂದರು.
ಪ್ರತಿ ಮನೆಗಳಲ್ಲೂ ಶೌಚಾಲಯಗಳಿವೆ. ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸಲಾಗಿದೆ. ಬೆಂಗಳೂರು- ಮೈಸೂರು ದಶಪಥ ನಿರ್ಮಾಣವಾಗಿದೆ. ಅದರಿಂದ ಒಂದೂವರೆ ಗಂಟೆಯಲ್ಲಿ ಮೈಸೂರಿಗೆ ಬರಬಹುದು ಎಂದು ತಿಳಿಸಿದರು.
ಮೈಸೂರಿನಲ್ಲಿ ಸೆಮಿಕಂಡಕ್ಟರ್ ಘಟಕ ಅನುಷ್ಠಾನಗೊಳಿಸಲಾಗುತ್ತಿದ್ದು, ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ನಗರಕ್ಕೆ ವಂದೇಭಾರತ್ ರೈಲು ಬಂದಿದೆ. ಎಲ್ಲ ಕ್ಷೇತ್ರಗಳೂ ಅಭಿವೃದ್ಧಿಗೊಳ್ಳುತ್ತಿವೆ ಎಂದು ಬಣ್ಣಿಸಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹಿಂದೂಗಳ ಹತ್ಯೆ ನಡೆಯಿತು. ಪಿಎಫ್ ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಯಿತು ಎಂದು ಟೀಕಿಸಿದರು.
ಪರಿಶಿಷ್ಟ ಸಮುದಾಯದ ಮೀಸಲಾತಿಯನ್ನು ಹೆಚ್ಚಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಅವರನ್ನು ಕಾಂಗ್ರೆಸ್ ಮತಬ್ಯಾಂಕ್ ಆಗಿ ಮಾತ್ರ ಬಳಸಿಕೊ೦ಡಿದೆಯಷ್ಟೇ. ಆದರೆ, ಬಿಜೆಪಿ ಸರ್ಕಾರವು ಮೀಸಲಾತಿ ಹೆಚ್ಚಳದೊಂದಿಗೆ ಹಾಗೂ ಒಳ ಮೀಸಲಾತಿ ಬೇಡಿಕೆಯನ್ನೂ ಈಡೇರಿಸಿದೆ ಎಂದು ಹೇಳಿದರು.
ದೇಶದಲ್ಲಿ ಎಲ್ಲಿಯೂ ಮುಸ್ಲಿಮರಿಗೆ ಶೇ 4 ಮೀಸಲಾತಿ ನೀಡಿರಲಿಲ್ಲ. ಹೀಗಾಗಿಯೇ, ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿ, ಲಿಂಗಾಯತ ಹಾಗೂ ಒಕ್ಕಲಿಗರಿಗೆ ಮೀಸಲಾತಿ ನೀಡಲಾಗಿದೆ. ಕಾಂಗ್ರೆಸ್ ಮೀಸಲಾತಿ ರದ್ದುಗೊಳಿಸುತ್ತೇವ ಎಂದು ಹೇಳಿದೆ. ಹಾಗಿದ್ದರೆ. ಯಾರ ಮೀಸಲಾತಿ ವಾಪಸ್ ಪಡೆಯುತ್ತೀರಿ ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರ, ಶಾಸಕ ಎಸ್.ಎ.ರಾಮದಾಸ್, ಮುಖಂಡರಾದ ಮೈ.ವಿ.ರವಿಶಂಕರ್, ಆರ್.ರಘು ಕೌಟಿಲ್ಯ, ಗಿರಿಧರ್, ಶಿವಕುಮಾರ್ ಇದ್ದರು.