ಚಿಕ್ಕಮಗಳೂರು(Chikkamagaluru): ಸುಳ್ಯ ತಾಲ್ಲೂಕಿನ ಪ್ರವೀಣ್ ನೆಟ್ಟಾರು ಹಂತಕರನ್ನು, ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ, ಜಿಲ್ಲೆಯ 9 ಮಂಡಲಗಳ ಅಧ್ಯಕ್ಷರು ಬುಧವಾರ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಹರಿವಿನಗಂಡಿ ಸಹಿತ ಎಲ್ಲ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಹರಿವಿನಗಂಡಿ, ಪ್ರವೀಣ್ ಸಾವು ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟ. ರಾತ್ರಿ ಸಮಯದಲ್ಲಿ ಹಿಂದಿನಿಂದ ಬಂದು ಹೊಡೆದಿರುವುದು ಹೇಡಿಗಳ ಕೃತ್ಯವಾಗಿದೆ. ಬಿಜೆಪಿ ಯುವ ಮೋರ್ಚಾದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ತೊಡಗಿಸಿಕೊಂಡಿದ್ದ ಹುಡುಗ ಸಮಾಜಕ್ಕಾಗಿ ಪ್ರಾಣ ತೆತ್ತಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ವಿಧಿಸಬೇಕು. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು.ಹಿಂದೆ ನಡೆದ ಕೊಲೆಗಳಿಗೆ ಯಾವ ರೀತಿ ನ್ಯಾಯ ಸಿಕ್ಕಿದೆ ಎನ್ನುವುದು ನಮ್ಮ ಕಣ್ಣ ಮುಂದಿದೆ. ಕಠಿಣ ಕ್ರಮ ಎನ್ನುವುದು ಭರವಸೆಯಾಗೇ ಉಳಿದಿದೆ. ಹೀಗಾಗಿ ಜಿಲ್ಲಾ ಯುವ ಮೋರ್ಚಾ ಎಲ್ಲ ಪದಾಧಿಕಾರಿಗಳು, 9 ಮಂಡಲಗಳ ಅಧ್ಯಕ್ಷರು ಪಕ್ಷದ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.