ನವದೆಹಲಿ(New Delhi): 2022ನೇ ವರ್ಷದ ಮೂರು ಕಾರಣಗಳಿಗಾಗಿ ಅತಿ ಮುಖ್ಯ ವರ್ಷ ಎಂದು ಪ್ರಧಾನಮಂತ್ರಿ(Pradhan mantri) ನರೇಂದ್ರ ಮೋದಿ(Narendra Modi) ತಿಳಿಸಿದ್ದಾರೆ.
ಬಿಜೆಪಿ ಪಕ್ಷದ 42ನೇ ಸಂಸ್ಥಾಪನಾ ದಿನದ(BJP foundation day) ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ(PM Narendra Modi) ಬುಧವಾರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು..
ಈ ವರ್ಷದ ಬಿಜೆಪಿ ಸಂಸ್ಥಾಪನಾ ದಿನ ಮೂರು ಮುಖ್ಯ ಕಾರಣಗಳಿಗಾಗಿ ಅತಿ ಮುಖ್ಯವಾಗಿದೆ. ಮೊದಲನೆಯದಾಗಿ ಈ ವರ್ಷ ನಾವು ಸ್ವಾತಂತ್ರ್ಯ ದಿನದ 75ನೇ ವರ್ಷವನ್ನು ಆಚರಿಸುತ್ತಿದ್ದೇವೆ. ಇದು ನಮ್ಮೆಲ್ಲರ ಸ್ಫೂರ್ತಿಗೆ ಬಹಳ ಮುಖ್ಯವಾದ ಸಂದರ್ಭವಾಗಿದೆ. ಎರಡನೆಯದಾಗಿ, ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿರುವುದರಿಂದ ಭಾರತಕ್ಕೆ ಹೊಸ ಹೊಸ ಅವಕಾಶಗಳು ಬರುತ್ತಿವೆ. ಮೂರನೆಯದಾಗಿ ಬಿಜೆಪಿ ಇತ್ತೀಚೆಗೆ 4 ರಾಜ್ಯಗಳಲ್ಲಿ ಜಯ ಗಳಿಸಿ ಅಧಿಕಾರಕ್ಕೆ ಬಂದಿದೆ. 3 ದಶಕಗಳ ನಂತರ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 100ರ ಗಡಿ ದಾಟಿದೆ ಎಂದರು.
ಯಾವುದೇ ಪಕ್ಷದ ಸರ್ಕಾರವಿರಲಿ ದೇಶಕ್ಕೆ ಏನನ್ನೂ ಮಾಡುವುದಿಲ್ಲ ಎಂದು ಜನ ಹೇಳಿಕೊಂಡಿದ್ದ ಕಾಲವೊಂದಿತ್ತು. ಜನರಲ್ಲಿ ಹತಾಶೆ ಇತ್ತು. ಇಂದು, ದೇಶದ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರವು ಬದಲಾಗುತ್ತಿದೆ ಮತ್ತು ವೇಗವಾಗಿ ಮುನ್ನಡೆಯುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಇಂದು, ಯಾವುದೇ ಭಯ ಅಥವಾ ಒತ್ತಡವಿಲ್ಲದೆ ತನ್ನ ಹಿತಾಸಕ್ತಿಗಳಿಗಾಗಿ ದೃಢವಾಗಿ ನಿಂತಿರುವ ಭಾರತವು ಪ್ರಪಂಚದ ಮುಂದೆ ಇದೆ. ಇಡೀ ಜಗತ್ತನ್ನು ಎರಡು ಪ್ರತಿಸ್ಪರ್ಧಿ ಸಂಗತಿಗಳಾಗಿ ವಿಂಗಡಿಸಿದಾಗ, ಭಾರತವನ್ನು ಮಾನವೀಯತೆಯ ಬಗ್ಗೆ ದೃಢವಾಗಿ ಮಾತನಾಡುವ ರಾಷ್ಟ್ರವಾಗಿ ನೋಡಲಾಗುತ್ತಿದೆ ಎಂದು ಅವರು ಹೇಳಿದರು.