ಮೈಸೂರು(Mysuru): ಜನಾಭಿಪ್ರಾಯಕ್ಕೆ ಬಿಜೆಪಿ ಸರ್ಕಾರ ಯಾವತ್ತೂ ಮನ್ನಣೆ ನೀಡಿಲ್ಲ. ಕೋಮುವಾದದ ಅಫೀಮನ್ನು ಪಠ್ಯಪುಸ್ತಕದಲ್ಲಿ ಸೇರಿಸುವುದು ಇವರ ಉದ್ದೇಶ ಎಂದು ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಪರಿಷ್ಕೃತ ಪಠ್ಯಕ್ರಮ ವಾಪಸ್ಸ್ ಪಡೆಯುವುದಿಲ್ಲವೆಂಬ ಸರ್ಕಾರದ ನಿಲುವನ್ನು ಖಂಡಿಸಿ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇದು ದಪ್ಪ ಚರ್ಮದ ಸರ್ಕಾರ. ಅವರಿಗೆ ಕಣ್ಣು ಕಾಣುವುದಿಲ್ಲ, ಕಿವಿಯೂ ಕೇಳುವುದಿಲ್ಲ. ಈ ಸರ್ಕಾರಕ್ಕೆ ಅಂಬೇಡ್ಕರ್, ಬಸವಣ್ಣ, ಕುವೆಂಪು, ಕನಕದಾಸರು ಯಾರ ಮೇಲೂ ಗೌರವ ಇಲ್ಲ, ಇದು ಪಠ್ಯ ಪರಿಷ್ಕರಣೆಯ ಮೂಲಕ ಮತ್ತೆ ಸಾಬೀತಾಗಿದೆ. ಬರಗೂರು ಸಮಿತಿ ತಪ್ಪು ಮಾಡಿಲ್ವಾ ಎಂದು ಇವರು ಈಗ ಹೇಳುವುದು ಸಮರ್ಥನೀಯವಲ್ಲ ಎಂದು ಕಿಡಿಕಾರಿದರು.
ಹುದ್ದೆಯನ್ನು ಜಾತಿಯಿಂದ ನೋಡುವುದು ಸಂವಿಧಾನಕ್ಕೆ ಮಾಡಿದ ಅಪಮಾನ:
ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಇದು ಸಾಮಾಜಿಕ ನ್ಯಾಯದ ಸಂಕೇತವಲ್ಲ. ಪ್ರಧಾನಿ ಹುದ್ದೆ, ರಾಷ್ಟ್ರಪತಿ ಹುದ್ದೆ, ಮುಖ್ಯಮಂತ್ರಿ ಹುದ್ದೆಯನ್ನು ಜಾತಿಯಿಂದ ನೋಡುವುದೇ ಸಂವಿಧಾನಕ್ಕೆ ಮಾಡುವ ಅಪಮಾನ. ದ್ರೌಪದಿ ಮುರ್ಮು ಅವರು ಬಿಜೆಪಿಯಲ್ಲಿ ಹಲವು ಘಟಕಗಳಲ್ಲಿ ಕೆಲಸ ಮಾಡಿದ್ದಾರೆ. ಜಾತಿ ನೋಡಿ ಅವರಿಗೆ ಸ್ಥಾನಕೊಡುವುದಾದರೆ ಅದು ತಪ್ಪು. ಅವರ ಕಾರ್ಯ ವೈಖರಿ ನೋಡಿ ಸ್ಥಾನ ಕೊಡಬೇಕು. ಜಾತಿ ನಮೂದಿಸುತ್ತಾ ಬಿಜೆಪಿ ಸಂವಿಧಾನಕ್ಕೆ ಅಗೌರವ ತೋರುತ್ತಿದೆ ಎಂದು ಆರೋಪಿಸಿದರು.
ಬೊಗಳೆ ಬಿಡುವವರ ಜೊತೆ ಏನು ಚರ್ಚೆ ?:
ಮೈಸೂರಿನ ಅಭಿವೃದ್ಧಿ ಚರ್ಚೆಗೆ ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಬರಲಿ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಡಾ.ಮಹಾದೇವಪ್ಪ, ನಾವು ಮಾಡಿರುವ ಅಭಿವೃದ್ಧಿ ಕಣ್ಣಿಗೆ ಕಾಣುತ್ತಿದೆ. ಏನೂ ಕೆಲಸ ಮಾಡದೇ ಬರೀ ಬೊಗಳೆ ಬಿಟ್ಟುಕೊಂಡು ಅವರು ಓಡಾಡುತ್ತಿದ್ದಾರೆ. ಬರಿ ಬೊಗಳೆ ಬಿಟ್ಟು ಓಡಾಡುವವರ ಜೊತೆ ಏನು ಚರ್ಚೆ ಮಾಡುವುದು. ಅವರು ಏನಾದರೂ ಅಭಿವೃದ್ಧಿ ಮಾಡಿದ್ದರೆ ತಾನೇ ಚರ್ಚೆ ಮಾಡೋದು. ಸುಮ್ಮನೆ ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಾ ಕೂತಿದ್ದಾರೆ. ನಾವು ಜಿಲ್ಲಾಸ್ಪತ್ರೆ ಕಟ್ಟದಿದ್ದರೆ ಕೋವಿಡ್ ಸಂದರ್ಭದಲ್ಲಿ ರೋಗಿಗಳನ್ನು ಎಲ್ಲಿ ಮಲಗಿಸುತ್ತಿದ್ದರು. ಇಂತಹ ನೂರು ಕೆಲಸ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು.
-******************