ಮಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯ ವಿರುದ್ಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರ್ಕಾರ ಗ್ಯಾರೆಂಟಿಗಳನ್ನು ಹಂತ ಹಂತವಾಗಿ ಜಾರಿ ಮಾಡುತ್ತಿದೆ. ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆವರೆಗೆ ಮಾತ್ರ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ವಿಧಾನಸಭೆಯ ಚುನಾವಣೆ ವೇಳೆ ಗ್ಯಾರಂಟಿ ಇರಲ್ಲ ಎಂದರು. ಈಗ ಲೋಕಸಭಾ ಚುನಾವಣೆವರೆಗೆ ಅಂತ ಹೇಳುತ್ತಿದ್ದಾರೆ. ಇದೇ ನೀಚ ಬುದ್ಧಿಯನ್ನು ಮಾಡಿಕೊಂಡು ಹೋಗಿ. ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ವಿಜೃಂಭಣೆಯಿಂದ ಮೆರೆಯುತ್ತಿದ್ದರು. ಅವರಿಗೆ 66 ಕೊಟ್ಟಿದ್ದಾರೆ. ಇದೇ ರೀತಿ ಸುಳ್ಳು ಹೇಳಿಕೊಂಡು ಹೋದರೆ 27 ಕ್ಕೆ ತಂದು ಕೂರಿಸುತ್ತಾರೆ. ನಿಮ್ಮ ಸಾಧನೆಗಳು ಶೂನ್ಯ ಇರುವುದರಿಂದ ರಾಜ್ಯದ ಜನ ಸೋಲಿಸಿ, ಕಾಂಗ್ರೆಸ್ ಗೆ ಶಕ್ತಿ ನೀಡಿದ್ದಾರೆ ಎಂದರು.
70 ವರ್ಷ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಬಿಜೆಪಿ ಕೇಳುತ್ತದೆ. ಕಾಂಗ್ರೆಸ್ ಪಕ್ಷದ ಚಿಂತನೆ, ಬಡವರಿಗೆ, ರೈತರಿಗೆ ಕಷ್ಟದಲ್ಲಿರುವ ಮಹಿಳೆಯರಿಗೆ, ಯವಕರಿಗೆ ಅನುಕೂಲ ಆಗುವ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಯಾವ ಸರ್ಕಾರ ಏನೆಲ್ಲ ಕಾರ್ಯಕ್ರಮ ಮಾಡಿದೆ ಎಂದು ನೋಡಿ. ನಮ್ಮ ತಂದೆ ಬಂಗಾರಪ್ಪ ಅವರು ಸಾಕಷ್ಟು ಕಾರ್ಯಕ್ರಮ ಮಾಡಿದ್ದಾರೆ. ದೇವರಾಜ ಅರಸು ಅವರು ಇದ್ದಾಗ ಬಗರ ಹುಕುಂಗೆ ಹೆಚ್ಚು ಶಕ್ತಿ ಕೊಟ್ಟಿದ್ದಾರೆ. ಅಕ್ರಮ ಸಕ್ರಮ ಉಚಿತ ವಿದ್ಯುತ್, ಅನ್ನಭಾಗ್ಯ ಸೇರಿದಂತೆ ಹಲವಾರು ಕಾರ್ಯಕ್ರಮ ಕೊಟ್ಟಿದ್ದಾರೆ. ಬೇರೆ ಪಕ್ಷಗಳು ಸಮಾಜದಲ್ಲಿ ಬೇದ ಭಾವ ತರುವ ಕೆಲಸ ಮಾಡಿದ್ದಾರೆ ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಸ್ಥಾನವನ್ನು ನನಗೆ ನೀಡಿದ್ದಾರೆ. ದೊಡ್ಡ ಜವಾಬ್ದಾರಿ ನನಗೆ ನೀಡಿದ್ದಾರೆ. ಇಲಾಖೆಯಲ್ಲಿ ಸಮಸ್ಯೆಗಳಿಲ್ಲ ಎಂದು ಹೇಳದೆ, ಅವುಗಳನ್ನು ಎದುರಿಸಿ ಮಕ್ಕಳ ಭವಿಷ್ಯಕ್ಕಾಗಿ ಒಳ್ಳೆಯ ತೀರ್ಮಾನ ಮಾಡಿ ಕೆಲಸವನ್ನು ಮಾಡುತ್ತೇವೆ. ಮಕ್ಕಳಿಗೆ ಮೊಟ್ಟೆಯನ್ನು 1 ರಿಂದ 10 ನೇ ತರಗತಿಯವರೆಗೆ ನೀಡುತ್ತಿದ್ದೇವೆ. ಮೊದಲು ವಾರಕ್ಕೊಮ್ಮೆ ಕೊಡುತ್ತಿದ್ದರು. ನಾವು ವಾರಕ್ಕೆ ಎರಡು ಬಾರಿ ಎಲ್ಲ ಶಾಲೆಗಳಿಗೆ ಕೊಡುವ ವ್ಯವಸ್ಥೆ ಮಾಡಿದ್ದೇವೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮೊಟ್ಟೆ, ಚಿಕ್ಕಿ ಮತ್ತು ಬಾಳೆಹಣ್ಣು ನೀಡಿ ಪೌಷ್ಟಿಕಾಂಶ ಹೆಚ್ಚಳಕ್ಕೆ ಗ್ಯಾರಂಟಿ ಯೋಜನೆಯ ಜೊತೆಗೆ ಮಾಡಿದ್ದೇವೆ ಎಂದರು.
ಶೂ ಭಾಗ್ಯ ಯೋಜನೆಗೆ ಹಣ ಬಿಡುಗಡೆ ಮಾಡಲಾಗಿದೆ. ಕಳೆದ ಬಾರಿ ಮಕ್ಕಳಿಗೆ ದೊರೆತಿರಲಿಲ್ಲ. ಮಕ್ಕಳು ಕಲಿಕೆಗೆ ಅನುಕೂಲ ಆಗುವ ರೀತಿಯಲ್ಲಿ ತಜ್ಞರ, ಅನುಭವಸ್ಥರ ಅಭಿಪ್ರಾಯ ಪಡೆದು ಮೌಲ್ಯಮಾಪನ ಕಡಿಮೆ ಆಗದ ರೀತಿಯ ಅವಶ್ಯಕ ಬದಲಾವಣೆ ಮಾಡುತ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಮಕ್ಕಳ ಅಭಿವೃದ್ಧಿ ನಮಗೆ ಮುಖ್ಯ ಎಂದರು.