ಬೆಂಗಳೂರು: ಸ್ನೇಹಿತೆಯ ಅಶ್ಲೀಲ ಫೋಟೋ ಮತ್ತು ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಹೇಮಂತ್ (32) ಮತ್ತು ಭದ್ರಾವತಿ ಮೂಲದ ಹರೀಶ್(30) ಬಂಧಿತರು. ಆರೋಪಿಗಳಿಂದ 7 ಮೊಬೈಲ್‌ಗಳು, 1 ಲ್ಯಾಪ್‌ಟಾಪ್‌ಗ್ಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಬ್ಬರು 8 ವರ್ಷಗಳಿಂದ ಸ್ನೇಹಿತರಾಗಿದ್ದಾರೆ.
ಆರೋಪಿಗಳ ಪೈಕಿ ಹೇಮಂತ್ 2017ರಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಾರುವ ಅಂಗಡಿ ನಡೆಸುತ್ತಿದ್ದಾನೆ. ಆಗ ಗ್ರಾಹಕರಾಗಿ ಬಂದಿದ್ದ ಸಂತ್ರಸ್ತೆ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದು, 4 ವರ್ಷಗಳ ಕಾಲ ಒಂದೇ ಮನೆಯಲ್ಲಿ ಲಿವಿಂಗ್ ಟುಗೆದರ್‌ನಲ್ಲಿದ್ದರು.
ಮತ್ತೂಂದೆಡೆ ಹೇಮಂತ್, ಸ್ನೇಹಿತೆಯ ಹೆಸರಿನಲ್ಲಿ ಅತ್ತಿಬೆಲೆಯಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆದಿದ್ದು, ಅದನ್ನು ಹರೀಶ್ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ. ಹೀಗಾಗಿ ಸಂತ್ರಸ್ತೆ ಇಬ್ಬರ ಜತೆಯೂ ಆತ್ಮೀಯವಾಗಿದ್ದಳು ಎಂಬುದು ಗೊತ್ತಾಗಿದೆ. ಈ ಮಧ್ಯೆ ಆರೋಪಿಗಳಿಬ್ಬರೂ 2021ರಲ್ಲಿ ಕಪಲ್ಸ್ ಪಾರ್ಟಿಗೆ ಸಂತ್ರಸ್ತೆಯನ್ನು ಕರೆದೊಯ್ದು, ಮದ್ಯದ ಅಮಲಿನಲ್ಲಿ ಬೇರೆ ಪುರುಷನ ಜತೆ ಸಹಕರಿಸುವಂತೆ ಆಕೆಗೆ ಪೀಡಿಸಿದ್ದರು. ಅದಕ್ಕೆ ನಿರಾಕರಿಸಿದಾಗ ಆರೋಪಿಗಳಿಬ್ಬರು ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಹೀಗಾಗಿ ಸಂತ್ರಸ್ತೆ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ಪೊಲೀಸರು ಹೇಳಿದರು.














