ಢಾಕಾ : ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ನಂತರ ಮೊದಲ ಸಾರ್ವತ್ರಿಕ ಚುನಾವಣೆ ನಡೆದು ಮತ ಎಣಿಕೆ ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ಬಂದಿದೆ. ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ ಬಹುಮತದ ಗಡಿ ದಾಟಿದೆ. ಅಧಿಕೃತ ಘೋಷಣೆ ಬಾಕಿ ಇದೆ ಎಂದು ವರದಿಯಾಗಿದೆ.
ಮತ ಎಣಿಕೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಮತ್ತು ಜಮಾತ್-ಇ-ಇಸ್ಲಾಮಿ ನೇತೃತ್ವದ ಮೈತ್ರಿಕೂಟಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಇದರ ನಡುವೆ, ಬಾಂಗ್ಲಾದೇಶ ಜಮಾತ್-ಇ-ಇಸ್ಲಾಮಿ ಚುನಾವಣಾ ಆಯೋಗವು ಹಲವಾರು ಕ್ಷೇತ್ರಗಳಲ್ಲಿ ಫಲಿತಾಂಶ ಪ್ರಕಟಣೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದೆ.
ಪಕ್ಷದ ಸಹಾಯಕ ಪ್ರಧಾನ ಕಾರ್ಯದರ್ಶಿ ಅಹ್ಸನುಲ್ ಮಹಬೂಬ್ ಜುಬೈರ್, ಆಯೋಗದ ಕೆಲವು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮತದಾನ ಮಗಿದ ಬಳಿಕ ಗುರುವಾರ ಸಂಜೆ 5:00 ಗಂಟೆಯಿಂದಲೇ ಮತೆಣಿಕೆ ಪ್ರಾರಂಭಿಸಲಾಗಿತ್ತು.
ಈಗ ಬೆಳಿಗ್ಗೆಯಾಗಿದೆ ಆದರೂ ಮತ ಎಣಿಕೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದು ಜುಬೈರ್ ಢಾಕಾದ ಅಗರ್‌ಗಾಂವ್‌ನಲ್ಲಿರುವ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ರಚನೆಯಾಗುವ ಮುಂದಿನ ಸರ್ಕಾರ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಮಾಡುವ ಸಾಧ್ಯತೆಗಳಿವೆ.















