ಜಾರ್ಸುಗುಡ (ಒಡಿಶಾ): ದೋಣಿಯೊಂದು ಮಗುಚಿದ ಪರಿಣಾಮ ಇಬ್ಬರು ಸಾವನ್ನಪ್ಪಿ, ಎಂಟು ಮಂದಿ ನಾಪತ್ತೆಯಾದ ಘಟನೆ ಒಡಿಶಾ ರಾಜ್ಯದ ಜಾರ್ಸುಗುಡ ಜಿಲ್ಲೆಯ ಮಹಾನದಿ ನದಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಸ್ಥಳೀಯ ಮೀನುಗಾರರು 35 ಪ್ರಯಾಣಿಕರನ್ನು ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ ಎಂದು ವರದಿಯಾಗಿದೆ.
ದೋಣಿಯು ಪಥರ್ಸೇನಿ ಕುಡಾದಿಂದ ಬರ್ಗರ್ ಜಿಲ್ಲೆಯ ಬಂಜಿಪಲ್ಲಿಗೆ ತೆರಳುತ್ತಿದ್ದಾಗ ಈ ಅಹಿತಕರ ಘಟನೆ ಸಂಭವಿಸಿದೆ. ವರದಿಗಳ ಪ್ರಕಾರ, ದೋಣಿಯಲ್ಲಿ ಸುಮಾರು 50 ಪ್ರಯಾಣಿಕರಿದ್ದರು. ಪೊಲೀಸರ ಪ್ರಕಾರ, ಜಾರ್ಸುಗುಡಾ ಜಿಲ್ಲೆಯ ರೆಂಗಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾರದಾ ಘಾಟ್ ತಲುಪುವ ಮುನ್ನವೇ ಬೋಟ್ ಪಲ್ಟಿಯಾಗಿದೆ.
ಮೀನುಗಾರರ ರಕ್ಷಣಾ ಕಾರ್ಯದ ಹೊರತಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಎಂಟು ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ನಾಪತ್ತೆಯಾದ ಉಳಿದ ಪ್ರಯಾಣಿಕರಿಗಾಗಿ ಹುಡುಕು ಕಾರ್ಯಾಚರಣೆ ಮುಂದುವರಿದಿದೆ.
ಮೃತ ಕುಟುಂಬಗಳಿಗೆ ಸಂತಾಪ ಸೂಚಿಸಿದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ನಾಲ್ಕು ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.