ಬೆಂಗಳೂರು(Bengaluru): ಯಾವುದೇ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಅಥವಾ ಇತರೆ ವ್ಯಕ್ತಿಗಳನ್ನು ಬಂಧಿಸುವಾಗ ಕೈ ಕೋಳ ತೊಡಿಸುವ ಪೊಲೀಸರು ಬಾಡಿ ಕ್ಯಾಮರಾ ಧರಿಸಿರಲೇಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಇದರಿಂದಾಗಿ ಪೊಲೀಸರು ಇನ್ನು ಆರೋಪಿಗಳನ್ನು ಬಂಧಿಸುವಾಗ ಬ್ಯಾಡಿ ಕ್ಯಾಮರಾ ಧರಿಸಿ ಅರೆಸ್ಟ್ ಮಾಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋದಲ್ಲಿ ದಾಖಲಿಸಬೇಕಾಗುತ್ತದೆ. ಇದರಿಂದ ಹಲವು ಗೊಂದಲಗಳಿಗೆ ತೆರೆಬೀಳಲಿದೆ. ಪೊಲೀಸರು ಕೂಡ ನಿಯಮ ಪಾಲನೆಗೆ ಸಹಕಾರಿಯಾಗಲಿದೆ.
ಚೆಕ್‌ಬೌನ್ಸ್ ಪ್ರಕರಣದಲ್ಲಿ ಬಂಧಿತ ವ್ಯಕ್ತಿಯನ್ನು ಕಾನೂನುಬಾಹಿರವಾಗಿ ಕೈಕೋಳ ಹಾಕಿದ್ದಕ್ಕಾಗಿ ಸರ್ಕಾರಕ್ಕೆ 2 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ 30 ವರ್ಷದ ಸುಪ್ರಿತ್ ಇಶ್ವತ್ ದಿವಟೆ, ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಕೈಕೋಳ ಹಾಕಿದ್ದಕ್ಕಾಗಿ ಪರಿಹಾರ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ನಿರ್ದೇಶನ ನೀಡಿದೆ.
ಚೆಕ್ ಅಮಾನ್ಯ ಪ್ರಕರಣದಲ್ಲಿ ನೀಡಲಾದ ವಾರಂಟ್ ಆಧಾರದ ಮೇಲೆ ವ್ಯಕ್ತಿಯನ್ನು ಬಂಧಿಸಿದ ನಂತರ ಕಾನೂನು ಬಾಹಿರವಾಗಿ ಕೈಕೋಳ ಹಾಕಿರುವುದನ್ನು ಗಮನಿಸಿದ ಹೈಕೋರ್ಟ್, ವ್ಯಕ್ತಿಯನ್ನು ಬಂಧಿಸಲು ಅಧಿಕಾರ ಹೊಂದಿರುವ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಬಾಡಿ ಕ್ಯಾಮೆರಾಗಳನ್ನು ಒದಗಿಸಬೇಕು ಎಂದು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ. ಇದರಿಂದ ಬಂಧನದ ಪ್ರತಿಯೊಂದು ದೃಶ್ಯವೂ ದಾಖಲಾಗಲಿದೆ.
ಮೈಕ್ರೋಫೋನ್ ಅಳವಡಿಸಬೇಕು: ಆ ನಿರ್ದಿಷ್ಟ ಸಮಯದಲ್ಲಿ ನಡೆಯುವ ಸಂಭಾಷಣೆಗಳನ್ನು ರೆಕಾರ್ಡ್ ಮಾಡಲು ಕ್ಯಾಮೆರಾಗಳಲ್ಲಿ ಮೈಕ್ರೊಫೋನ್ ಅನ್ನು ಸಹ ಅಳವಡಿಸಬೇಕು ಮತ್ತು ಬಂಧನ ಪ್ರಕ್ರಿಯೆಯ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಎರಡನ್ನೂ ಕನಿಷ್ಠ ರೆಕಾರ್ಡಿಂಗ್ ದಿನಾಂಕದಿಂದ ಒಂದು ವರ್ಷ.ಅವಧಿಯವರೆಗೆ ಉಳಿಸಿಕೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥರು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ (ಎಸ್ ಒಪಿ)ಯನ್ನು ಸಿದ್ಧಪಡಿಸಬೇಕು ಮತ್ತು ಅಂತಹ ಅಧಿಕಾರಿಗಳಿಗೆ ಬಾಡಿ ಕ್ಯಾಮೆರಾಗಳನ್ನು ಬಳಸುವ ಬಗ್ಗೆ ಸೂಕ್ತ ತರಬೇತಿಯನ್ನು ನೀಡಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಪ್ರಕರಣದ ಹಿನ್ನೆಲೆ: ಚಿಕ್ಕೋಡಿಯ ಸುಪ್ರಿತ್ ಇಶ್ವತ್ ದಿವಟೆ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ 1881 ರ ಅಡಿಯಲ್ಲಿ ತಮ್ಮ ವಿರುದ್ಧ ದಾಖಲಿಸಲಾದ ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ.2019 ರಲ್ಲಿ ಚಿಕ್ಕೋಡಿ ತಾಲೂಕಿನ ವಿಚಾರಣಾ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಆಧರಿಸಿ ಅವರನ್ನು ಬಂಧಿಸುವ ಸಂದರ್ಭದಲ್ಲಿ ವ್ಯಾಪ್ತಿಯ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಕೈಕೋಳ ಹಾಕಿದರು. ಇದು ಕಾನೂನು ಬಾಹಿರ, ಹಾಗಾಗಿ ಪರಿಹಾರ ನೀಡಬೇಕು ಎಂದು ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲದೆ, ತಮಗೆ ಕೈಕೋಳ ಹಾಕಿರುವುದನ್ನು ಸಾಬೀತುಪಡಿಸಲು ಮೊಬೈಲ್ ಫೋನ್ ಬಳಸಿ ತನ್ನ ಸ್ನೇಹಿತರೊಬ್ಬರು ರೆಕಾರ್ಡ್ ಮಾಡಿದ ವೀಡಿಯೊವನ್ನು ಸಲ್ಲಿಸಿದ್ದರು.