ಮನೆ ರಾಜ್ಯ ಸರಗೂರು ತಾಲೂಕು ಕಚೇರಿಯಲ್ಲಿ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ..!

ಸರಗೂರು ತಾಲೂಕು ಕಚೇರಿಯಲ್ಲಿ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ..!

0

ಮೈಸೂರು/ಹಾಸನ : ಮೈಸೂರಿನ ಸರಗೂರು ತಾಲೂಕು ಕಚೇರಿ ಹಾಗೂ ಹಾಸನದ ಆಲೂರು ತಾಲ್ಲೂಕು ಕಚೇರಿಗಳಿಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿದ್ದು, ಭಾರೀ ಆತಂಕ ಸೃಷ್ಟಿಯಾಗಿದೆ. ಬೆದರಿಕೆ ಸಂದೇಶದ ಬೆನ್ನಲ್ಲೇ ಪೊಲೀಸರು ಫುಲ್‌ ಅಲರ್ಟ್‌ ಆಗಿದ್ದು, ತೀವ್ರ ಶೋಧ ಕೈಗೊಂಡಿದ್ದಾರೆ. ಸರಗೂರು ತಾಲೂಕು ಕಚೇರಿಯಲ್ಲಿ ಆರ್‌ಡಿಎಕ್ಸ್‌ ಸ್ಫೋಟಕ ಇಡಲಾಗಿದೆ. ಮಧ್ಯಾಹ್ನದ ವೇಳೆಗೆ ಅದು ಸ್ಫೋಟಗೊಳ್ಳಲಿದೆ ಎಂಬ ಸಂದೇಶವೊಂದು ಅಪರಿಚಿತ ವ್ಯಕ್ತಿಯ ಇ-ಮೇಲ್‌ ವಿಳಾಸದಿಂದ ಬಂದಿದೆ.

ಇದು ತಿಳಿಯುತ್ತಿದ್ದಂತೆ ಅಧಿಕಾರಿಗಳು, ಸಾರ್ಬಜನಿಕರು, ಸುತ್ತಮುತ್ತಲಿನ ಪ್ರದೇಶದ ಜನರು ಆತಂಕಗೊಂಡಿದ್ದಾರೆ. ಮಾಹಿತಿ ಪಡೆದ ಬಳಿಕ ಸರಗೂರು ಪೊಲೀಸರು ಬಾಂಬ್‌ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ದೌಢಾಯಿಸಿದ್ದು, ಶೋಧ ನಡೆಸುತ್ತಿದ್ದಾರೆ. ಇದೇ ಇ-ಮೇಲ್‌ ವಿಳಾಸದಿಂದ ತಮಿಳು ನಟ ಅಜಿತ್‌ ಕುಮಾರ್‌ ಅವರ ಚೆನ್ನೈ ಕಚೇರಿಗೂ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ.

ಹಾಸನ ಜಿಲ್ಲೆಯ ಆಲೂರು ತಾಲೂಕು ಕಚೇರಿಗೂ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಸಂದೇಶ ಬಂದಿದ್ದು, ಕಚೇರಿ ಸಿಬ್ಬಂದಿ ತಹಶೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ತಹಶೀಲ್ದಾರ್‌ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸ್ಥಳಕ್ಕೆ ದೌಢಾಯಿಸಿದ ಪೊಲೀಸರು ಕಚೇರಿ ಸಿಬ್ಬಂದಿಯನ್ನೆಲ್ಲ ಹೊರಕ್ಕೆ ಕಳುಸಿ ತಪಾಸಣೆ ನಡೆಸಿದ್ದಾರೆ.

ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದೊಂದಿಗೆ ಪೊಲೀಸ್‌ ಅಧಿಕಾರಿಗಳು ಆಗಮಿಸಿ ತೀವ್ರ ತಪಾಸಣೆ ನಡೆಸಿದ್ದಾರೆ. ಇದೇ ತಿಂಗಳ ಡಿ.15ರಂದು ಹಾಸನದ ಜಿಲ್ಲಾಧಿಕಾರಿಗೆ ಬಾಂಬ್ ಬೆದರಿಕೆ ಬಂದಿತ್ತು ಅನ್ನೋದು ಗಮನಾರ್ಹವಾಗಿದೆ.