ಬೆಂಗಳೂರು : ಬೆಂಗಳೂರಿನ ಪ್ರಸಿದ್ಧ ಆಚಾರ್ಯ ಕಾಲೇಜಿಗೆ ಇ-ಮೇಲ್ ಮೂಲಕ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಸಂದೇಶ ಕಳಿಸಿದ್ದಾರೆ. ಕಾಲೇಜಿನ ಆಡಳಿತ ಸಿಬ್ಬಂದಿಗೆ ಬಂದಿರುವ ಇ-ಮೇಲ್‌ನಲ್ಲಿ, ದುಷ್ಕರ್ಮಿಗಳು ಪ್ರಾಂಶುಪಾಲರನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಆಘಾತಕಾರಿ ವಿಷಯವನ್ನು ಸಿಬ್ಬಂದಿ ಇ-ಮೇಲ್ ಪರಿಶೀಲನೆ ಸಂದರ್ಭದಲ್ಲಿ ಗಮನಿಸಿದ್ದಾಗಿ ತಿಳಿದುಬಂದಿದೆ.
ಘಟನೆ ಬೆಳಕಿಗೆ ಬಂದ ಕೂಡಲೇ, ಕಾಲೇಜು ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ಎನ್‌ಸಿಆರ್ ದಾಖಲಿಸಿಕೊಂಡು ತನಿಖೆಗೆ ಕೈ ಹಾಕಿದ್ದಾರೆ. ಈ ಇ-ಮೇಲ್ ಕಳಿಸಿದವರ ಗುರುತು ಪತ್ತೆಹಚ್ಚಲು ಸೈಬರ್ ಕ್ರೈಂ ವಿಭಾಗ ತಕ್ಷಣ ಕಾರ್ಯಾರಂಭಿಸಿದೆ.
ಪೊಲೀಸರು ಈ ಬೆದರಿಕೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಇದು ಸಹಜ ಇ-ಮೇಲ್ ಅಲ್ಲ. ನಾವು ಇದನ್ನು ಸಂಪೂರ್ಣವಾಗಿ ತನಿಖೆ ಮಾಡುತ್ತಿದ್ದು, ಇ-ಮೇಲ್‌ಕಳಿಸಿದವರ ಐಪಿ ವಿಳಾಸ, ಇತರ ಡಿಜಿಟಲ್ ಪತ್ತೆಗಳನ್ನು ಪರಿಶೀಲಿಸುತ್ತಿದ್ದೇವೆ,” ಎಂದಿದ್ದಾರೆ.
ಈ ಬೆದರಿಕೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಇದು ವೈಯಕ್ತಿಕ ದ್ವೇಷ ಅಥವಾ ಭಯ ಸೃಷ್ಟಿಸುವ ನಿಟ್ಟಿನಲ್ಲಿ ಮಾಡಿದ ಕೃತ್ಯ ಎನ್ನುವ ಹಲವು ಶಂಕೆಗಳು ಮುಂದಿಟ್ಟಿರುವ ಪೊಲೀಸರು, ಎಲ್ಲ ಆಯ್ಕೆಗಳನ್ನು ಪರಿಗಣಿಸುತ್ತಿದ್ದಾರೆ.














