ಮನೆ ಕಾನೂನು ಬುಚ್‌ ವಿರುದ್ಧ ಎಫ್‌ಐಆರ್ ದಾಖಲಿಸಲು 4 ವಾರ ತಡೆ ನೀಡಿದ ಬಾಂಬೆ ಹೈಕೋರ್ಟ್‌

ಬುಚ್‌ ವಿರುದ್ಧ ಎಫ್‌ಐಆರ್ ದಾಖಲಿಸಲು 4 ವಾರ ತಡೆ ನೀಡಿದ ಬಾಂಬೆ ಹೈಕೋರ್ಟ್‌

0

ಮುಂಬೈ: ಷೇರು ಮಾರುಕಟ್ಟೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್‌ ಹಾಗೂ ಇತರೆ ಐವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಬಾಂಬೆ ಹೈಕೋರ್ಟ್ ನಾಲ್ಕು ವಾರಗಳ ತಡೆ ನೀಡಿದೆ.

Join Our Whatsapp Group

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಶಿವಕುಮಾರ್ ಡಿಗೆ, ವಿಶೇಷ ನ್ಯಾಯಾಲಯವು ಪ್ರಕರಣದ ವಿವರಗಳನ್ನು ನೋಡದೆ, ಆರೋಪಿಗಳ ಮೇಲೆ ಯಾವುದೇ ನಿರ್ದಿಷ್ಟ ಆರೋಪ ಹೊರಿಸದೆ ಯಾಂತ್ರಿಕವಾಗಿ ಆದೇಶಿಸಿದೆ ಎಂದಿದ್ದಾರೆ.

ಆದ್ದರಿಂದ, ಆದೇಶವನ್ನು ಮುಂದಿನ ದಿನಾಂಕದವರೆಗೆ ತಡೆಹಿಡಿಯಲಾಗಿದೆ. ಪ್ರಕರಣದ ದೂರುದಾರರಾದ ಸಪನ್ ಶ್ರೀವಾಸ್ತವ ಅವರಿಗೆ ಅರ್ಜಿಗಳಿಗೆ ಉತ್ತರವಾಗಿ ಅಫಿಡವಿಟ್ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ.

ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಇಲ್ಲಿನ ವಿಶೇಷ ನ್ಯಾಯಾಲಯವು ಮಾರ್ಚ್ 1ರಂದು ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸೆಬಿ ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್‌, ಬಿಎಸ್‌ಇ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುಂದರರಾಮನ್‌ ರಾಮಮೂರ್ತಿ ಹಾಗೂ ಇತರರು ಸೋಮವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮಾಧವಿ ಪುರಿ ಬುಚ್ ಹಾಗೂ ಇತರ ಐವರು ಅಧಿಕಾರಿಗಳು ಸೆಬಿಯ ನಿಯಮಾವಳಿ ಉಲ್ಲಂಘಿಸಿ ಆರ್ಥಿಕ ವಂಚನೆ ಎಸಗಿದ್ದಾರೆ ಎಂದು ಪತ್ರಕರ್ತ ಸಪನ್ ಶ್ರೀವಾಸ್ತವ ಅವರು, ಮುಂಬೈನ ಎಸಿಬಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಶಶಿಕಾಂತ್ ಏಕನಾಥರಾವ್ ಬಂಗಾರ್‌ ಎಫ್‌ಐಆರ್‌ ದಾಖಲಿಸುವಂತೆ ಎಸಿಬಿಗೆ ನಿರ್ದೇಶನ ನೀಡಿದ್ದರು.