ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದ ಬಾಂಬರ್ ಯಾರೆಂಬುದು ಒಂದು ಹಂತಕ್ಕೆ ಪತ್ತೆ ಆಗಿದೆ. ಅದನ್ನು ದೃಢಪಡಿಸಿಕೊಳ್ಳಬೇಕಿ ಎಂದು ಗೃಹಸಚಿವ ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಾಂಬರ್ ಯಾರೆಂಬುದು ಬಹುತೇಕ ಪತ್ತೆಯಾಗಿದೆ. ಅದನ್ನು ಸಿಸಿಬಿ, ಎನ್ಐಎ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮಾರ್ಚ್ 1ರಂದು ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು.
ಸಂವಿಧಾನ ಬದಲಾವಣೆ ಕುರಿತು ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಗೃಹ ಸಚಿವರು, ಪ್ರಧಾನಿಯವರು ಅಂಬೇಡ್ಕರ್ ಸಂವಿಧಾನ ಕೊಟ್ಟಿದ್ದನ್ನು ಶ್ಲಾಘಿಸಿದ್ದಾರೆ. ಸಂವಿಧಾನ ಇಲ್ಲದಿದ್ರೆ ನಾನು ಪ್ರಧಾನಿಯೇ ಆಗುತ್ತಿರಲಿಲ್ಲ ಎಂದಿದ್ದಾರೆ. ಆದರೆ, ಅವರ ಪಕ್ಷದ ಸಂಸದ ಸಂವಿಧಾನ ಬದಲು ಮಾಡುತ್ತೇವೆ ಎನ್ನುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಲವು ಬಾರಿ ಸಂಸದ ಅನಂತಕುಮಾರ್ ಹೆಗಡೆ ಹೀಗೆ ಹೇಳಿದ್ದಾರೆ. ಕೇವಲ ಸಂಸದ ಹಗಡೆ ಹೇಳಿಕೆಯಿಂದ ದೂರ ಇದ್ದೇವೆ ಎಂದರೆ ಸಾಲದು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸಂವಿಧಾನವನ್ನೇ ಬದಲಿಸುತ್ತೇವೆ ಎಂಬುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅವರು ಹೇಳಿದರು.
ಈ ಹಿಂದೆ ಕೂಡ ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ವಿಚಾರವಾಗಿ ನೀಡಿದ್ದ ಹೇಳಿಕೆ ರಾಜ್ಯದಾದ್ಯಂತ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಕೂಡ ಬಿಜೆಪಿಯು ಹೆಗಡೆ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಆದರೆ ಹೇಳಿಕೆಗೆ ಸಂಬಂಧಿಸಿದಂತೆ ಶಿಸ್ತು ಕ್ರಮ ಕೈಗೊಂಡಿರಲಿಲ್ಲ. ಇದನ್ನೇ ಅಸ್ತ್ರವಾಗಿಸಿಕೊಂಡಿದ್ದ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಹೆಗಡೆ ಮತ್ತೊಮ್ಮೆ ಸಂವಿಧಾನ ಬದಲಾವಣೆ ಕುರಿತ ಹೇಳಿಕೆ ನೀಡಿದ್ದು ಕಾಂಗ್ರೆಸ್ ಪಕ್ಷದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾರಿ ಹೆಗಡೆ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಸಂವಿಧಾನ ಬದಲಾವಣೆ ಸಂಬಂಧ ಹೆಗಡೆ ನೀಡಿರುವ ಹೇಳಿಕೆ ಅವರ ವೈಯಕ್ತಿಕ. ಪಕ್ಷದ ನಿಲುವಲ್ಲ ಎಂದು ಬಿಜೆಪಿ ಹೇಳಿದೆ.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಇಂದು ಸಂಜೆ ವೇಳೆಗೆ ಬಹುತೇಕ ಅಂತಿಮಗೊಳ್ಳಲಿದೆ. ಇಂದು 21 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಗೆ ಅನುಮೋದನೆ ದೊರೆಯಲಿದೆ. ಆದಷ್ಟು ಬೇಗ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಬೇಕು. ಅಭ್ಯರ್ಥಿಗಳ ಬಗ್ಗೆ ಸಂಜೆ ಅಂತಿಮವಾಗಿ ಗೊತ್ತಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.