ಬೆಂಗಳೂರು: ಬೊಮ್ಮಾಯಿ ಅವರ ಸರ್ಕಾರ ಎಂದರೆ, ಅಸಮರ್ಥರ ಸರ್ಕಸ್ ಹಾಗೂ ಭ್ರಷ್ಟರ ಪಡೆ ಎಂದರ್ಥ. ಬಿಜೆಪಿಯ ಡಿಎನ್’ಎ ವಂಚನೆ, ಮೋಸ, ವಿಭಜನೆಯಿಂದ ಕೂಡಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅಭಿಪ್ರಾಯಿಸಿದರು.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯನ್ನು ಮೂರು ಪದಗಳಲ್ಲಿ ಬಣ್ಣಿಸುವುದಾದರೆ ಸುಳ್ಳು ಭರವಸೆ, ದುರಾಡಳಿತ, ಒಡೆದು ಆಳುವ ನೀತಿಎಂದು ಕಿಡಿಕಾರಿದರು.
ಪಕ್ಷಾಂತರ ಹಾಗೂ ಭ್ರಷ್ಟಾಚಾರದಿಂದ ರಚನೆಯಾದ ಬಿಜೆಪಿಯ ಅನೈತಿಕ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಶಾಪವಾಗಿದೆ. ಭ್ರಷ್ಟಾಸುರ ಬೊಮ್ಮಾಯಿ ಅವರ ಸರ್ಕಾರದ ಅವಧಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಈ ಸರ್ಕಾರ ಸುಳ್ಳು ಭರವಸೆ ಮೂಲಕ ರಾಜ್ಯದ ಜನರ ಕನಸನ್ನು ನುಚ್ಚುನೂರು ಮಾಡಿದೆ. ಜತೆಗೆ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಿದೆ ಎಂದು ಆರೋಪಿಸಿದರು.
ಬಿಜೆಪಿಯ 2018ರ ಪ್ರಣಾಳಿಕೆಯಲ್ಲಿ ಕೊಟ್ಟ 600 ಭರವಸೆಗಳ ಪೈಕಿ ಶೇ.91ರಷ್ಟು ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ. ರೈತರಿಗೆ ಕೊಟ್ಟ 112 ಭರವಸೆಗಳ ಪೈಕಿ 97 ಭರವಸೆಗಳನ್ನು ಈಡೇರಿಸಿಲ್ಲ. ಬಿಜೆಪಿ ಸರ್ಕಾರ ಮಹಿಳೆಯರಿಗೆ ನೀಡಿದ್ದ 26 ಭರವಸೆಗಳ ಪೈಕಿ 24 ಭರವಸೆ ಈಡೇರಿಸಿಲ್ಲ. ರಾಜ್ಯದ ಯುವಕರಿಗೆ ಕೊಟ್ಟ 18 ಭರವಸೆಗಳಲ್ಲಿ 17 ಭರವಸೆ ಈಡೇರಿಸಲು ಸರ್ಕಾರ ವಿಫಲವಾಗಲು ಕಾರಣವೇನು ಎಂಬುದನ್ನು ಮುಖ್ಯಮಂತ್ರಿಗಳು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ನೇಮಕಾತಿ ಅಕ್ರಮಗಳ ಪರಿಣಾಮ 2.52 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದೆ. 1300 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದ ಪಿಯು ಕಾಲೇಜು ನಿರ್ಮಾಣವಾಗಿಲ್ಲ. ಮಾತ್ರವಲ್ಲದೇ ಪಧವಿವರೆಗೂ ಉಚಿತ ಶಿಕ್ಷಣ ನೀಡುವ ಭರವಸೆಯನ್ನು ಸರ್ಕಾರ ಕಸದಬುಟ್ಟಿಗೆ ಎಸೆಯಲು ಕಾರಣವೇನು ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ SC/ST/OBC ಸಮುದಾಯಗಳಿಗೆ ನೀಡಿದ್ದ 81 ಭರವಸೆಗಳಲ್ಲಿ 77 ಭರವಸೆಗಳನ್ನು ಈಡೇರಿಸಿಲ್ಲ. ಎಸ್ಸಿ ಎಸ್ಟಿ ಗೆ ಮೀಸಲಾದ ರೂ. 7000 ಕೋಟಿ ನಿಧಿಯನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡುವ ಮೂಲಕ ಎಸ್ಸಿ ಎಸ್ಟಿ ಸಮುದಾಯಕ್ಕೆ ವಂಚಿಸಲು ಕಾರಣವೇನು ಎಂದು ಬೊಮ್ಮಾಯಿ ಅವರನ್ನು ಸುರ್ಜೆವಾಲ ಕೇಳಿದ್ದಾರೆ.
2018ರ ಬಿಜೆಪಿ ಪ್ರಣಾಳಿಕೆಯಲ್ಲಿ “ಶಿಕ್ಷಣ” ಕೇತ್ರಕ್ಕೆ ಘೋಷಿಸಲಾದ 32 ಭರವಸೆಗಳ ಪೈಕಿ 29 ಈಡೇರಿಸಿಲ್ಲ, “ಆರೋಗ್ಯ ” ಕ್ಷೇತ್ರಕ್ಕೆ ನೀಡಿದ್ದ 40 ಭರವಸೆಗಳ ಪೈಕಿ 35 ಭರವಸೆ ಈಡೇರಿಲ್ಲ, ಮೂಲ ಸೌಕರ್ಯ ಕ್ಷೇತ್ರದಲ್ಲಿ 48 ಭರವಸೆಗಳ ಪೈಕಿ 40 ಭರವಸೆ ಪೂರ್ಣಗೊಂಡಿಲ್ಲ, ಕೈಗಾರಿಕಾಭಿವೃದ್ಧಿಗೆ 23 ಭರವಸೆಗಳನ್ನು ನೀಡಿ 22 ಭರವಸೆ ಈಡೇರಿಸಿಲ್ಲ, ಈ ಭರವಸೆಗಳ ವಿಚಾರಗಳಲ್ಲಿ ಸರ್ಕಾರ ವಿಫಲವಾಗಿದ್ದು ಏಕೆ? ಎಂಬುದಕ್ಕೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
2023-24ನೇ ಸಾಲಿನ ಸುಳ್ಳಿನ ಬಜೆಟ್ ಮಂಡನೆಯಾಗುವ ಮೊದಲೇ ಕನ್ನಡಿಗರು ಅದನ್ನು ತಿರಸ್ಕಾರ ಮಾಡಿದ್ದಾರೆ ಎಂದು ರಣದೀಪ್ ಸುರ್ಜೆವಾಲ ತಿಳಿಸಿದರು.