ಮೈಸೂರು(Mysuru): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೈಗೊಂಡಿರುವ ‘ಭಾರತ್ ಜೋಡೋ’ ಪಾದಯಾತ್ರೆ ಕುರಿತಂತೆ, ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಕೃತಿ ತರುವ ಆಲೋಚನೆಯಿದೆ ಎಂದು ಕಾಂಗ್ರೆಸ್ ರಾಜ್ಯ ಘಟಕದ ವಕ್ತಾರ ಎಚ್.ಎ.ವೆಂಕಟೇಶ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯವರು ನಡೆಸುತ್ತಿದ್ದ ಟೀಕೆಗಳಿಗೆ ರಾಹುಲ್ ಗಾಂಧಿ ಅವರು ಕೈಗೊಂಡಿರುವ ‘ಭಾರತ್ ಜೋಡೋ’ ಯಾತ್ರೆ ಮೂಲಕ ದಿಟ್ಟ ಉತ್ತರ ನೀಡಿದ್ದಾರೆ. ದೇಶದ ಇತಿಹಾಸದಲ್ಲಿ ಐತಿಹಾಸಿಕ ದಾಖಲೆಯಾಗಿ ಉಳಿಯಲಿದೆ. ಇದರಿಂದ, ಬಿಜೆಪಿಯವರಿಗೆ ನಡುಕ ಉಂಟಾಗಿದೆ. ಸಂತನಂತೆ, ಜನರ ಕಷ್ಟಗಳಿಗೆ ರಾಹುಲ್‌ಗಾಂಧಿ ಕಿವಿಯಾಗಿದ್ದಾರೆ. ಯಾತ್ರೆಯು ದೇಶದಲ್ಲಿ ಸಾಮಾಜಿಕ ಅಲೆಗಳನ್ನು ಎಬ್ಬಿಸಿದ್ದು, ಕರ್ನಾಟಕದಲ್ಲಿ ಸಂಚರಿಸಿರುವ ಚಿತ್ರಣದ ಕುರಿತಂತೆ ಪುಸ್ತಕದಲ್ಲಿ ದಾಖಲಿಸಲಾಗುವುದು. ಪುಸ್ತಕದಲ್ಲಿ ದಾಖಲಿಸಲಾಗುವುದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೃತಿಯಲ್ಲಿ ಏನೇನಿರಲಿದೆ: ಪಾದಯಾತ್ರೆಯಲ್ಲಿ ಭಾಗವಹಿಸಿದವರ ಅನುಭವ, ಸಂದರ್ಶನ, ರಾಹುಲ್ ಗಾಂಧಿ ಪ್ರತಿದಿನ ನಡೆಸಿದ ಭಾಷಣ, ಸಂವಾದ ಕಾರ್ಯಕ್ರಮಗಳ ವರದಿ, ಜನತೆ ತೋರಿದ ಅಭೂತಪೂರ್ವ ಸ್ವಾಗತ, ರಾಹುಲ್ ಗಾಂಧಿ ಅವರಿಗೆ ಆಶೀರ್ವದಿಸಿದ ಹಿರಿಯರ ಆ ಕ್ಷಣಗಳ ಚಿತ್ರಣ, ಪತ್ರಿಕೆಗಳಲ್ಲಿ ಪ್ರಕಟವಾದ ಹೇಳಿಕೆ, ಲೇಖನಗಳು, ಸ್ವಯಂಪ್ರೇರಿತವಾಗಿ ಭಾಗವಹಿಸಿದವರ ಅನಿಸಿಕೆ, ಪ್ರಗತಿಪರರೊಂದಿಗಿನ ಮಾತು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಾದಯಾತ್ರೆಯಲ್ಲಿ ಭಾಗವಹಿಸಿದ ಕ್ಷಣ, ಕಾರ್ಯಕರ್ತರಲ್ಲಿ ಹೆಚ್ಚಿದ ಸ್ಫೂರ್ತಿ, ಅರಣ್ಯ ವೀಕ್ಷಣೆ, ಜನರು ನೀಡಿದ ಗೌರವ ಸನ್ಮಾನಗಳನ್ನು ಕೃತಿಯಲ್ಲಿ ದಾಖಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ನ.22ರಂದು ರಾಯಚೂರಿನಲ್ಲಿ ಹಾದುಹೋಗಲಿರುವ ‘ಭಾರತ್ ಜೋಡೋ’ ಯಾತ್ರೆಯಲ್ಲಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕೂಡ ಭಾಗವಹಿಸಲಿದ್ದಾರೆ. ಅವರ ಭೇಟಿಯನ್ನು ಕೃತಿಯಲ್ಲಿ ದಾಖಲಿಸಲಾಗುವುದು ಎಂದು ಅವರು ತಿಳಿಸಿದರು.
ಮೈಸೂರು ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮೈಸೂರು ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ವಿಶ್ವವಿದ್ಯಾಲಯ ಸಿಂಡಿಕೇಟ್‌ನ ಮಾಜಿ ಸದಸ್ಯ ಎನ್.ಗೋಪಿನಂದ್, ನಗರ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಎಲ್.ಗೌಡ, ಸೇವಾದಳದ ನಗರ ಘಟಕದ ಅಧ್ಯಕ್ಷ ಗಿರೀಶ್ ಇದ್ದರು.