ಮೈಸೂರು(Mysuru): ಬಿಜೆಪಿ ವತಿಯಿಂದ ಜಿಲ್ಲೆಯಾದ್ಯಂತ ಜ.2ರಿಂದ 12ರವರೆಗೆ ‘ಬೂತ್ ವಿಜಯ ಅಭಿಯಾನ’ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆ ಮೇರೆಗೆ ರಾಜ್ಯದಾದ್ಯಂತ ಅಭಿಯಾನ ನಡೆಸಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯಲ್ಲೂ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.
ಮತಗಟ್ಟೆಗಳಲ್ಲಿ ಪಕ್ಷದ ಶಕ್ತಿಯನ್ನು ಹೆಚ್ಚಿಸುವುದು, ಕೇಂದ್ರ ಹಾಗೂ ರಾಜ್ಯದ ಡಬಲ್ ಎಂಜಿನ್ ಸರ್ಕಾರವು ರೈತರು, ಶೋಷಿತರು, ಮಹಿಳೆಯರ ಏಳಿಗೆಗೆ ನೀಡಿರುವ ನೂರಾರು ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿಕೊಡುವುದು ಪ್ರಮುಖ ಉದ್ದೇಶವಾಗಿದೆ ಎಂದರು.
12 ಮಂದಿಯನ್ನೊಳಗೊಂಡ ಬೂತ್ ಸಮಿತಿಯ ರಚನೆ ಪೂರ್ಣಗೊಳಿಸಲಾಗುವುದು. ಮತದಾರರ ಪಟ್ಟಿಯ ಪ್ರತಿ ಪುಟಕ್ಕೂ ಪೇಜ್ ಪ್ರಮುಖರನ್ನು ನಿಯುಕ್ತಿ ಮಾಡಲಾಗುವುದು. ವಾಟ್ಸ್’ಆ್ಯಪ್ ಗ್ರೂಪ್’ಗಳನ್ನು ರಚಿಸಿ ಮಂಡಲ, ಜಿಲ್ಲಾ ಹಾಗೂ ರಾಜ್ಯದ ನಂಬರ್’ಗಳೊಂದಿಗೆ ಜೋಡಿಸಲಾಗುವುದು. ಪ್ರತಿ ಮತಗಟ್ಟೆಯಲ್ಲಿ 25 ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸಲಾಗುವುದು. ಪ್ರತಿ ಮತಗಟ್ಟೆಯಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ 1,786 ಬೂತ್‌ಗಳಿವೆ. 44,650 ಮನೆಗಳ ಮೇಲೆ ಪಕ್ಷದ ಬಾವುಟಗಳನ್ನು ಹಾರಿಸಲು ಉದ್ದೇಶಿಸಲಾಗಿದೆ. 56 ಮಹಾಶಕ್ತಿ ಕೇಂದ್ರಗಳಿದ್ದು, 351 ಶಕ್ತಿ ಕೇಂದ್ರಗಳಿವೆ. ಇಲ್ಲೆಲ್ಲಾ ಕಾರ್ಯಕ್ರಮ ನಡೆಯಲಿದೆ. ಇದೆಲ್ಲವನ್ನೂ ಐವರ ತಂಡವು ಗಮನಿಸಲಿದೆ ಎಂದು ತಿಳಿಸಿದರು.
ಪಕ್ಷದ ಮತಗಟ್ಟೆ ಮಟ್ಟದ ಸಮಿತಿಯು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎನ್ನುವುದನ್ನು ಪರಿಶೀಲನೆ ನಡೆಸಲಾಗುವುದು. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಹೊಸ ಹುರುಪು ನೀಡುವುದಕ್ಕಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿವೆ. ಗ್ರಾಮಾಂತರ ಜಿಲ್ಲಾ ಘಟಕದ ವ್ಯಾಪ್ತಿಯಲ್ಲಿ 7ರಲ್ಲಿ ಕನಿಷ್ಠ 5 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಪ್ರತಿಕ್ರಿಯಿಸಿದರು.
ಪದಾಧಿಕಾರಿಗಳಾದ ಎಚ್.ಪಿ.ಗೋಪಾಲ್, ಗಿರೀಶ್, ಪರೀಕ್ಷಿತರಾಜ್ ಅರಸ್ ಇದ್ದರು.