ಮುಂಬೈ(Mumbai): ಕರ್ನಾಟಕ ಸರ್ಕಾರ ಜೊತೆಗಿನ ಬೆಳಗಾವಿ ಗಡಿ ವಿವಾದ ಕುರಿತು ಮಹಾರಾಷ್ಟ್ರ ವಿಧಾನಸಭೆ ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು.
ಗಡಿ ಪ್ರದೇಶಗಳು. ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಕುರಿತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು.
ಕರ್ನಾಟಕದ ಬೆಳಗಾವಿ, ಕಾರವಾರ, ನಿಪ್ಪಾಣಿ, ಭಾಲ್ಕಿ, ಬೀದರ್ ನಗರಗಳು ಮತ್ತು 865 ಮರಾಠಿ ಭಾಷಿಕರ ಹಳ್ಳಿಗಳನ್ನು ಸೇರಿಸಿಕೊಳ್ಳಲು ಕಾನೂನಾತ್ಮ ಹೋರಾಟ ನಡೆಸುವ ನಿರ್ಣಯವನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಈ ನಿರ್ಣಯ ಮಂಡಿಸಿದರು. ಕರ್ನಾಟಕ ವಿಧಾನಸಭೆಯಲ್ಲಿ ಇದೇ ವಿಷಯದ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ. ಕರ್ನಾಟಕವು ಉದ್ದೇಶಪೂರ್ವಕವಾಗಿ ಗಡಿ ಕದನಕ್ಕೆ ಉತ್ತೇಜನ ನೀಡಿದೆ ಎಂದು ನಿರ್ಣಯದಲ್ಲಿ ಆರೋಪಿಸಲಾಗಿದೆ.
ಬೆಳಗಾವಿ, ಕಾರವಾರ, ನಿಪ್ಪಾಣಿ, ಭಾಲ್ಕಿ, ಬೀದರ್ ನಗರ ಮತ್ತು 865 ಹಳ್ಳಿಗಳಲ್ಲಿರುವ ಮರಾಠಿ ಭಾಷಿಕರೊಂದಿಗೆ ಮಹಾರಾಷ್ಟ್ರ ಸರ್ಕಾರ ದೃಢವಾಗಿ ನಿಂತಿದೆ. ಕರ್ನಾಟಕದಲ್ಲಿರುವ ಮರಾಠಿ ಭಾಷಿಕ ಹಳ್ಳಿಗಳ ಇಂಚು ಭೂಮಿಯನ್ನೂ ಸೇರಿಸಿಕೊಳ್ಳಲು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನುಬದ್ಧವಾಗಿ ಹೋರಾಟ ನಡೆಸಲಿದೆ ಎನ್ನುವ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಮಹಾರಾಷ್ಟ್ರದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಸಭೆಯು ಗುರುವಾರ ಸರ್ವಾನುಮತದಿಂದ ನಿರ್ಣಯವೊಂದನ್ನು ಅಂಗೀಕರಿಸಿತ್ತು. ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಮಹಾರಾಷ್ಟ್ರಕ್ಕೆ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ ಎಂದು ನಿರ್ಣಯದಲ್ಲಿ ಹೇಳಲಾಗಿತ್ತು. ವಿವಾದವು ಮಹಾರಾಷ್ಟ್ರದ ಸೃಷ್ಟಿ ಎಂದು ಉಲ್ಲೇಖಿಸಲಾಗಿತ್ತು.
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ 1957ಕ್ಕೂ ಹಿಂದಿನದು. ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬೆಳಗಾವಿಯ ಮೇಲೆ ಮಹಾರಾಷ್ಟ್ರ ತನ್ನ ಹಕ್ಕು ಪ್ರತಿಪಾದಿಸುತ್ತಲೇ ಬಂದಿದೆ. ಬೆಳಗಾವಿಯಲ್ಲಿ ಮರಾಠಿಗರು ಗಣನೀಯವಾಗಿರುವುದೂ ಇದಕ್ಕೆ ಕಾರಣವಾಗಿದೆ.ರಾಜ್ಯಗಳ ಮರವಿಂಗಡಣೆ ಕಾಯ್ದೆ ಮತ್ತು 1967 ರ ಮಹಾಜನ್ ಆಯೋಗದ ವರದಿಯ ಆಧಾರದಲ್ಲಿ ರಚನೆಯಾದ ಭಾಷಾವಾರು ರಾಜ್ಯಗಳ ಗಡಿರೇಖೆಯನ್ನು ಕರ್ನಾಟಕ ಪ್ರತಿಪಾದಿಸುತ್ತಿದೆ.