ಲಂಡನ್ (London): ಅತೀವ ರಾಜಕೀಯ ಬಿಕ್ಕಟ್ಟು ಹಾಗೂ ಸಚಿವರ ಸರಣಿ ರಾಜಿನಾಮೆ ಬೆನ್ನಲ್ಲೇ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕೊನೆಗೂ ರಾಜೀನಾಮೆ ಸಲ್ಲಿಸಿದ್ದಾರೆ.
ಮುಂದಿನ ಪ್ರಧಾನಿಯ ಆಯ್ಕೆ ಆಗುವವರೆಗೆ ಹುದ್ದೆಯಲ್ಲಿ ಮುಂದುವರಿಯುವುದಾಗಿ ಕನ್ಸರ್ವೇಟಿವ್ ಪಕ್ಷದ ನಾಯಕ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ. ಜೊತೆಗೆ ವಿಶ್ವದ ಅತ್ಯಂತ ಶ್ರೇಷ್ಠ ಕೆಲಸವನ್ನು ಬಿಟ್ಟುಕೊಡುವ ನೋವು ಕಾಡುತ್ತಿದೆ. ಅದು ಎಲ್ಲರಿಗೂ ತಿಳಿಯಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಜಾನ್ಸನ್ ಪಕ್ಷದಲ್ಲಿ ತನ್ನ ವಿರುದ್ಧ ಗುಂಪುಗೂಡಿದ್ದವರನ್ನು ದೂರಿದರು. ಕನ್ಸರ್ವೇಟಿವ್ ಪಕ್ಷಕ್ಕೆ ಹೊಸ ನಾಯಕನ ಆಯ್ಕೆಯಾಗಬೇಕು ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಹೊಸ ಪ್ರಧಾನಿ ನೇಮಕಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಬ್ರಿಟನ್ ನಾಯಕತ್ವದ ಚುಕ್ಕಾಣಿ ಹಿಡಿದ ಬೋರಿಸ್ ಜಾನ್ಸನ್, 1987ರ ನಂತರ ಕನ್ಸರ್ವೆಟಿವ್ ಪಾರ್ಟಿಗೆ ಅತಿ ದೊಡ್ಡ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಈಗ ತಮ್ಮದೇ ಪಕ್ಷದ ಸಂಸದರ ವಿಶ್ವಾಸ ಕಳೆದುಕೊಂಡಿರುವ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಮುಂದಿನ ಪ್ರಧಾನಿ ಹುದ್ದೆ ರೇಸ್ ನಲ್ಲಿ ಭಾರತ ಮೂಲದ ರಿಷಿ ಸುನಕ್, ಇರಾಕ್ ಸಂಜಾತ ನಧೀಂ ಜಹಾವಿ ಸೇರಿದಂತೆ ಹಲವರ ಹೆಸರು ಮುಂಚೂಣಿಯಲ್ಲಿದೆ.
ರಿಷಿ ಸುನಕ್ ಸಹಿತ ಎಂಟು ಹಿರಿಯ ಸಚಿವರು ಮತ್ತು ಐವರು ಕಿರಿಯ ಸಚಿವರು ಸರ್ಕಾರದಿಂದ ಹೊರ ನಡೆದ ಬಳಿಕ ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವ ಅನಿವಾರ್ಯತೆಗೆ ಸಿಲುಕಿದ್ದರು. ಹಲವು ಸಚಿವರು ರಾಜೀನಾಮೆ ಸಲ್ಲಿಸಿದ್ದರೂ, ಪ್ರಧಾನಿ ಹುದ್ದೆ ತೊರೆಯುವುದಿಲ್ಲ ಎಂದೂ ಜಾನ್ಸನ್ ಪಟ್ಟು ಹಿಡಿದಿದ್ದರು. ಆದರೆ ಇದೀಗ ರಾಜೀನಾಮೆ ಸಲ್ಲಿಸಿದ್ದಾರೆ.