ಮನೆ ರಾಜಕೀಯ ವರ್ಷಾಂತ್ಯದೊಳಗೆ ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದ ಪೂರ್ಣಗೊಳಿಸಲು ಬೋರಿಸ್ ಜಾನ್ಸನ್-ನರೇಂದ್ರ ಮೋದಿಪ್ರತಿಜ್ಞೆ

ವರ್ಷಾಂತ್ಯದೊಳಗೆ ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದ ಪೂರ್ಣಗೊಳಿಸಲು ಬೋರಿಸ್ ಜಾನ್ಸನ್-ನರೇಂದ್ರ ಮೋದಿ
ಪ್ರತಿಜ್ಞೆ

0

ನವದೆಹಲಿ (NewDelhi)- ವರ್ಷಾಂತ್ಯದೊಳಗೆ ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದ ಪೂರ್ಣಗೊಳಿಸಲು ಭಾರತ-ಬ್ರಿಟನ್ ನಿರ್ಧರಿಸಿದೆ.
ಕ್ಷಿಪ್ರ ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಶುಕ್ರವಾರ ಹೊಸ ಮತ್ತು ವಿಸ್ತರಿತ ಭಾರತ-ಯುಕೆ ರಕ್ಷಣಾ ಪಾಲುದಾರಿಕೆ ಒಪ್ಪಿಕೊಂಡಿದ್ದು, ವರ್ಷಾಂತ್ಯದೊಳಗೆ ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದ ಪೂರ್ಣಗೊಳಿಸಲು ಪ್ರತಿಜ್ಞೆ ಮಾಡಿದ್ದಾರೆ.
“ಇಂದು, ನಾವು ಹೊಸ ಮತ್ತು ವಿಸ್ತರಿತ ರಕ್ಷಣಾ ಹಾಗೂ ಭದ್ರತಾ ಪಾಲುದಾರಿಕೆಯನ್ನು ಒಪ್ಪಿಕೊಂಡಿದ್ದೇವೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ಹಿಂದೆಂದಿಗಿಂತಲೂ ಈಗ ಸಂಬಂಧ ಉತ್ತಮವಾಗಿದೆ. ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ(ರಕ್ಷಣೆಯಲ್ಲಿ) ಅನ್ನು ಬೆಂಬಲಿಸಲು ದಶಕಗಳ ಬದ್ಧತೆಯನ್ನು ಹೊಂದಿದ್ದೇವೆ” ಎಂದು ಬೋರಿಸ್ ಜಾನ್ಸನ್ ಹೇಳಿದರು.
ಮುಕ್ತ ವ್ಯಾಪಾರ ಒಪ್ಪಂದವನ್ನು(ಎಫ್‌ಟಿಎ) ಉಲ್ಲೇಖಿಸಿದ ಬ್ರಿಟನ್ ಪ್ರಧಾನಿ, ಅಕ್ಟೋಬರ್‌ನಲ್ಲಿ ದೀಪಾವಳಿಗೂ ಮುನ್ನ ಈ ಒಪ್ಪಂದವನ್ನು ಪೂರ್ಣಗೊಳಿಸಲು ಎರಡೂ ಕಡೆಯ ಸಮಾಲೋಚಕರು ಬಯಸುತ್ತಾರೆ ಎಂದು ತಿಳಿಸಿದರು.
ಭಾರತ ಭೇಟಿಯ ಎರಡನೇ ಮತ್ತು ಅಂತಿಮ ದಿನದಂದು ಪ್ರಧಾನಿ ಮೋದಿ ಅವರೊಂದಿಗಿನ ವ್ಯಾಪಕ ಮಾತುಕತೆಯ ನಂತರ ರಕ್ಷಣಾ ಉತ್ಪನ್ನ ಖರೀದಿಗಾಗಿ “ಅಧಿಕಾರಶಾಹಿ ಹಸ್ತಕ್ಷೇಪ ಮತ್ತು ಪೂರೈಕೆ ಸಮಯವನ್ನು ಕಡಿತಗೊಳಿಸಲು” ಬ್ರಿಟನ್ ಭಾರತಕ್ಕಾಗಿ ಮುಕ್ತ ಸಾರ್ವತ್ರಿಕ ರಫ್ತು ಪರವಾನಗಿಯನ್ನು(OGEL) ರಚಿಸುತ್ತಿದೆ ಎಂದು ಬೋರಿಸ್ ಜಾನ್ಸನ್ ಅವರು ಹೇಳಿದ್ದಾರೆ.
ಕ್ಷಿಪ್ರಗತಿಯಲ್ಲಿ ರಕ್ಷಣಾ ಸಾಮಗ್ರಿಗಳ ಸಾಗಾಣಿಕೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಭಾರತಕ್ಕೆ ಬ್ರಿಟನ್ ಮುಕ್ತ ಸಾರ್ವತ್ರಿಕ ರಫ್ತು ಪರವಾನಗಿ ಒದಗಿಸಲಿದ್ದು, ಇದರಿಂದ ರಕ್ಷಣಾ ಸಾಮಗ್ರಿಗಳ ಪೂರೈಕೆ ಅವಧಿ ಕಡಿಮೆಯಾಗಲಿದೆ.
ಭೂಮಿ, ಸಮುದ್ರ, ಬಾಹ್ಯಾಕಾಶ, ಸೈಬರ್ ಸುರಕ್ಷತೆ ಸೇರಿದಂತೆ ಐದು ವಲಯಗಳಲ್ಲಿನ ಭದ್ರತೆಗೆ ಸಂಬಂಧಿಸಿದ ಹೊಸ ಬೆದರಿಕೆಗಳನ್ನು ಎದುರಿಸಲು ಉಭಯ ದೇಶಗಳು ಒಟ್ಟಿಗೆ ಕೆಲಸ ಮಾಡಲು ನಿರ್ಧರಿಸಿವೆ. ಹಿಂದೂ ಮಹಾ ಸಾಗರದಲ್ಲಿ ಎದುರಾಗುತ್ತಿರುವ ಅಪಾಯಗಳನ್ನು ಹತ್ತಿಕ್ಕಲು ಹೊಸ ತಂತ್ರಜ್ಞಾನ ಹಾಗೂ ಯುದ್ಧ ವಿಮಾನಗಳ ಅಭಿವೃದ್ಧಿಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಬ್ರಿಟಿಷ್ ಪ್ರಧಾನಿ ಹೇಳಿದ್ದಾರೆ.