ರಾಯಚೂರು: ಜಿಲ್ಲೆಯ ಅರಕೇರಾ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಬಾಲಕ ಸಾವಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದಡಿ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯಿತಿಯ ಪಿಡಿಒ ರೇಣುಕಾ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಒ ಶಶಿಧರ್ ಆದೇಶ ಹೊರಡಿಸಿದ್ದಾರೆ.
ಇನ್ನು ಮೃತ ಬಾಲಕನ ತಂದೆ ಈಶ್ವರಪ್ಪ ದೇವದುರ್ಗ ಠಾಣೆಯಲ್ಲಿ ಪಿಡಿಒ ವಿರುದ್ಧ ದೂರು ದಾಖಲಿಸಿದ್ದಾರೆ. ಪಿಡಿಒ ರೇಣುಕಾ ಅವರ ನಿರ್ಲಕ್ಷ್ಯವೇ ನನ್ನ ಮಗನ ಸಾವಿಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕುಡಿಯುವ ನೀರಿನ ಪೈಪ್ ಒಡೆದಿರುವ ಬಗ್ಗೆ ಗ್ರಾಮಸ್ಥರು ಪಿಡಿಒಗೆ ಮಾಹಿತಿ ನೀಡಿದ್ದರು. ಆದರೂ ಕೂಡ ಪೈಪ್ ಸರಿಪಡಿಸದೆ ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಪೈಪಿನೊಳಕೆ ಪಕ್ಕದಲ್ಲೇ ಇದ್ದ ಚರಂಡಿ ನೀರು ಸೇರಿಕೊಂಡು ನೀರು ಕಲುಷಿತಗೊಂಡಿದೆ. ಈ ನೀರನ್ನು ಕುಡಿದ ಗ್ರಾಮಸ್ಥರು ಅಸ್ವಸ್ಥರಾಗಿದ್ದು, ಬಾಲಕ ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.














