ರಾಯಚೂರು: ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದ ಬಾಲಕನ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ಘೋಷಿಸಿ ಹಣ ಬಿಡುಗಡೆಗೊಳಿಸಿ ಸಿಎಂ ಜಂಟಿ ಕಾರ್ಯದರ್ಶಿ ಪಿಎ ಗೋಪಾಲ್ ಆದೇಶಿಸಿದ್ದಾರೆ.
ಕುಡಿಯುವ ನೀರಿನ ಪೈಪ್ ಗೆ ಚರಂಡಿ ನೀರು ಸೇರಿಸಿಕೊಂಡು ಕಲುಷಿತವಾಗಿದ್ದ ನೀರನ್ನು ಸೇವಿಸಿ ಬಾಲಕ ಹನುಮೇಶ್ ಸಾವನ್ನಪ್ಪಿದ್ದ. ಜಿಲ್ಲೆಯ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಈ ಬಗ್ಗೆ ಖುದ್ದು ರಾಯಚೂರು ಜಿಲ್ಲಾ ಪಂಚಾಯತ ಸಿಇಓ ಶಶಿಧರ್ ಕುರೇರಗೆ ಕರೆ ಮಾಡಿ, ಸೂಕ್ತ ಕ್ರಮ ಹಾಗೂ ಪರಿಹಾರ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು.
ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಬೇಕು. ಲ್ಯಾಬ್ ಗೆ ನೀರಿನ ಸ್ಯಾಂಪಲ್ ಕಳುಹಿಸಿ ತಕ್ಷಣ ವರದಿ ಪಡೆಯಬೇಕು. ವರದಿ ಆಧಾರದಲ್ಲಿ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆಗೆ ಕ್ರಮಕೈಗೊಳ್ಳಿ. ಮತ್ತೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕಲುಷಿತ ನೀರು ಕುಡಿದು ಅಸ್ವಸ್ಥರಾಗಿರುವವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸಿಇಒಗೆ ಸಿಎಂ ಸೂಚನೆ ನೀಡಿದ್ದರು.















