ಬಿಹಾರ: ಮುಜಾಫರ್ ಪುರದ ಸಕ್ರಾದ ಮಚ್ಚಿ ಗ್ರಾಮದ ರಾಜೇಶ್ ಮಹತೋ ಅವರ 10 ವರ್ಷದ ಮಗ ಆದರ್ಶ್ ಹುಣಸೆಹಣ್ಣು ತಿನ್ನುವಾಗ ಬೀಜ ನುಂಗಿ ಸಾವನ್ನಪ್ಪಿದ್ದಾನೆ.
ಆದರ್ಶ್ ಮೂರನೇ ತರಗತಿ ವಿದ್ಯಾರ್ಥಿ.
ಆದರ್ಶ್ ಶನಿವಾರ ಹುಣಸೆಹಣ್ಣು ತಿನ್ನುತ್ತಿದ್ದ ವೇಳೆ ಅದರ ಬೀಜವನ್ನು ನುಂಗಿದ್ದಾನೆ. ಪರಿಣಾಮ ಹುಣಸೆ ಬೀಜ ಗಂಟಲಲ್ಲಿ ಸಿಲುಕಿದ್ದು, ಉಸಿರಾಟದ ತೊಂದರೆ ಉಂಟಾಗಿ ಸಾವನ್ನಪ್ಪಿರುವುದು ತಿಳಿದುಬಂದಿದೆ.
ಬಾಲಕ ಉಸಿರಾಡಲು ಕಷ್ಟಪಡುತ್ತಿದ್ದಂತೆ ಪೋಷಕರಲ್ಲಿ ಸಹಜವಾಗಿ ಆತಂಕ ಹುಟ್ಟಿಕೊಂಡಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಬಾಲಕನ ಸ್ಥಿತಿ ಗಂಭೀರವಾಗಿದೆ. ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಮುಜಾಫರ್ ಪುರಕ್ಕೆ ಕರೆದೊಯ್ಯಲಾಗಿದೆ. ಮುಜಾಫರ್ ಪುರ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ನಡೆಸಿದಾಗ ಬಾಲಕನ ಶ್ವಾಸಕೋಶದಲ್ಲಿ ಹುಣಸೆ ಬೀಜಗಳು ಅಂಟಿಕೊಂಡಿರುವುದು ಕಂಡುಬಂದಿದೆ.
ತಕ್ಷಣ ಬಾಲಕನ ಪ್ರಾಣ ಉಳಿಸಲು ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದ ಕಾರಣ ವೈದ್ಯರ ಸಲಹೆಯಂತೆ ಕುಟುಂಬಸ್ಥರು ಪಾಟ್ನಾದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆತನ ಆಸ್ಪತ್ರೆ ತಲುಪುವ ಮಾರ್ಗಮಧ್ಯೆ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.