ಬೆಂಗಳೂರು: ಹೆಣ್ಣೂರು ಬಂಡೆ ಮುಖ್ಯ ರಸ್ತೆಯಲ್ಲಿ ದ್ವಿಚಕ್ರವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದು ಬಾಲಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ವೇದ ಕಲಿಯಲು ಆಂಧ್ರದಿಂದ ಬೆಂಗಳೂರಿಗೆ ಬಂದಿದ್ದ 12 ವರ್ಷದ ಬಾಲಕ ತನ್ನ ಹುಟ್ಟುಹಬ್ಬದ ದಿನವೇ ದುರ್ಮರಣ ಹೊಂದಿದ್ದಾನೆ. ಆಂಧ್ರ ಪ್ರದೇಶದ ಚಿತ್ತೂರು ಮೂಲದ ಆರ್.ಟಿ.ನಗರದಲ್ಲಿ ವಾಸಿಸುತ್ತಿದ್ದ ಭಾನು ತೇಜ ಮೃತ ಬಾಲಕ.
ಆಂಧ್ರ ಪ್ರದೇಶದ ಚಿತ್ತೂರು ಮೂಲದ ರವಿ ಹಾಗೂ ಸುಮಾ ದಂಪತಿ ಪುತ್ರ ಭಾನು ತೇಜ ಆರ್.ಟಿ.ನಗರ ಸತ್ಯಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ವೇದ ಕಲಿಯಲು ಕಳೆದ 1 ತಿಂಗಳ ಹಿಂದೆ ಬಂದಿದ್ದ. ಅಲ್ಲಿ ಗುರುಗಳ ಜೊತೆಗೆ ವಾಸವಾಗಿದ್ದ.
ಶನಿವಾರ ಭಾನುತೇಜನ ಹುಟ್ಟುಹಬ್ಬವಾಗಿತ್ತು. ಹುಟ್ಟು ಹಬ್ಬ ಆಚರಿಸಲು ಹೊರಮಾವುನಲ್ಲಿರುವ ತನ್ನ ಅಕ್ಕನ ಮನೆಗೆ ಸೋಹದರ ಚಕ್ರಧರಣ್ ಜೊತೆಗೆ ಬೈಕ್‌ನಲ್ಲಿ ಹೋಗಿದ್ದ. ಅಕ್ಕನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿದ ಬಳಿಕ ರಾತ್ರಿ 11.20ರಲ್ಲಿ ಅಣ್ಣ ಚಕ್ರಧರಣ್ ಜೊತೆಗೆ ಹೊರಮಾವಿನಿಂದ ಆರ್.ಟಿ. ನಗರದತ್ತ ವಾಪಸ್ಸಾಗುತ್ತಿದ್ದ. ಮಾರ್ಗಮದ್ಯೆ ಹೆಣ್ಣೂರು ಬಂಡೆ ಮುಖ್ಯರಸ್ತೆಯಲ್ಲಿ ಐಚರ್ ಟ್ರಕ್ ಹಿಂಬದಿಯಿಂದ ಇವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ದ್ವಿಚಕ್ರವಾಹನದ ಹಿಂಬದಿ ಕುಳಿತಿದ್ದ ಭಾನುತೇಜ್ ಕೆಳಗೆ ಬಿದ್ದಿದ್ದ. ಈ ವೇಳೆ ಬಾಲಕ ತಲೆಯ ಮೇಲೆ ಟ್ರಕ್‌ನ ಎರಡು ಚಕ್ರಗಳು ಹಿರಿದಿವೆ. ಗಂಭೀರವಾಗಿ ಗಾಯಗೊಂಡ ಭಾನು ತೇಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ದ್ವಿಚಕ್ರವಾಹನ ಚಲಾಯಿಸುತ್ತಿದ್ದ ಚಕ್ರ ಧರಣ್‌ಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಟ್ರಕ್ ಚಾಲಕ ಪರಾರಿಯಾಗಿದ್ದು, ಹೆಣ್ಣೂರು ಸಂಚಾರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.














