ಬೆಂಗಳೂರು: ತನ್ನ ಪ್ರಿಯಕರನ ಮೇಲಿನ ನಂಬಿಕೆ ಮತ್ತು ಮದುವೆಯಾಗುವ ಭರವಸೆಯಿಂದ ಬೆಂಗಳೂರಿನ 20 ವರ್ಷದ ಯುವತಿಯೊಬ್ಬಳು ತನ್ನ ಕುಟುಂಬದ 2.5 ಕೋಟಿ ರೂ ಹಣವನ್ನು ಕಳೆದುಕೊಂಡಿದ್ದಾಳೆ.
ಬಾಯ್ಫ್ರೆಂಡ್ ಆಕೆಯೊಂದಿಗೆ ಅನ್ಯೋನ್ಯವಾಗಿರುವ ವೀಡಿಯೋಗಳನ್ನು ಬಳಸಿಕೊಂಡು ಆಕೆಯನ್ನು ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಅಲ್ಲದೆ ತನ್ನದೇ ಪ್ರೇಯಸಿಯಿಂದ ಆಭರಣಗಳು, ದುಬಾರಿ ವಾಚ್ಗಳು ಮತ್ತು ಅತ್ಯಾಧುನಿಕ ಕಾರನ್ನು ಸಹ ವಸೂಲಿ ಮಾಡಿದ್ದಾನೆ.
ಬ್ಲ್ಯಾಕ್ಮೇಲ್ ತಿಂಗಳುಗಳ ಕಾಲ ಮುಂದುವರೆದಿದ್ದು, ಕೊನೆಗೆ ಸಂತ್ರಸ್ತೆ ತಡೆದುಕೊಳ್ಳಲು ಸಾಧ್ಯವಾಗದೆ ಇತ್ತೀಚೆಗೆ ಪೊಲೀಸರ ಬಳಿ ದೂರು ನೀಡಿದ್ದಾರೆ. ಪೊಲೀಸರು ಆಕೆಯ ಗೆಳೆಯನನ್ನು ಬಂಧಿಸಿದ್ದಾರೆ.
ಇಬ್ಬರೂ ಬೋರ್ಡಿಂಗ್ ಶಾಲೆಯಲ್ಲಿದ್ದಾಗ ತನ್ನ ಗೆಳೆಯ ಮೋಹನ್ ಕುಮಾರ್ ಅವರನ್ನು ಭೇಟಿಯಾಗಿದ್ದೆ ಎಂದು ಈಗ 20ರ ಹರೆಯದ ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಅವರಿಬ್ಬರು ಉತ್ತಮ ಸ್ನೇಹಿತರಾಗಿದ್ದು, ಆದರೆ ಬೋರ್ಡಿಂಗ್ ಶಾಲೆಯ ಬಳಿಕ ಸಂಪರ್ಕವಿರಲಿಲ್ಲ. ವರ್ಷಗಳ ನಂತರ ಅವರು ಮತ್ತೆ ಭೇಟಿಯಾಗಿದ್ದು, ಪರಸ್ಪರ ಪ್ರೀತಿ ಮಾಡುತ್ತಿದ್ದರು.
ಯುವತಿಯನ್ನು ಮದುವೆಯಾಗುವುದಾಗಿ ಕುಮಾರ್ ಭರವಸೆ ನೀಡಿದ್ದರಿಂದ ಇಬ್ಬರೂ ಒಟ್ಟಿಗೆ ಪ್ರವಾಸಕ್ಕೆ ತೆರಳಿದ್ದರು. ಅಂತಹ ಪ್ರವಾಸಗಳ ಸಮಯದಲ್ಲಿ, ಕುಮಾರ್ ಅವರು ಆತ್ಮೀಯರಾಗುವ ವೀಡಿಯೊಗಳನ್ನು ಮಾಡಿದ್ದ. ಅದನ್ನು ತಮಗಾಗಿ ಮಾತ್ರ ಮಾಡುತ್ತಿದ್ದಾರೆ ಎಂದು ಕುಮಾರ್ ಆ ಸಂದರ್ಭದಲ್ಲಿ ಆಕೆಗೆ ಭರವಸೆ ನೀಡಿದ್ದ.
ಕೆಲವು ವೀಡಿಯೊಗಳಲ್ಲಿ, ಕುಮಾರ್ ತನ್ನ ಮುಖ ಗೋಚರಿಸದಂತೆ ಎಚ್ಚರಿಕೆ ವಹಿಸಿದ್ದ. ಬಳಿಕ ಈ ವಿಡಿಯೋಗಳನ್ನು ಬಳಸಿ ಪ್ರಿಯತಮೆಯನ್ನೇ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ. ದೊಡ್ಡ ಮೊತ್ತದ ಹಣ ನೀಡದಿದ್ದಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಇದರಿಂದ ಬೆಚ್ಚಿಬಿದ್ದ ಮಹಿಳೆ ತನ್ನ ಅಜ್ಜಿಯ ಖಾತೆಯಿಂದ ರಹಸ್ಯವಾಗಿ 1.25 ಕೋಟಿ ರೂ ಡ್ರಾ ಮಾಡಿ ಕುಮಾರ್ ನೀಡಿದ ಕೆಲವು ಖಾತೆಗಳಿಗೆ ವರ್ಗಾಯಿಸಿದ್ದಾಳೆ. ಬ್ಲ್ಯಾಕ್ಮೇಲ್ ಮುಂದುವರಿದಂತೆ ವಿವಿಧ ಸಂದರ್ಭಗಳಲ್ಲಿ ಒಟ್ಟು 1.32 ಕೋಟಿ ರೂ ನಗದು ನೀಡಿದ್ದಾಳೆ.
ಆದರೂ ಕುಮಾರ್ ನ ಬೇಡಿಕೆ ನಿಲ್ಲಲಿಲ್ಲ. ಹುಡುಗಿ ಬಳಿ ದುಬಾರಿ ವಾಚ್ಗಳು, ಆಭರಣಗಳು ಮತ್ತು ಐಷಾರಾಮಿ ಕಾರನ್ನು ನೀಡುವಂತೆ ಮಾಡಿದ್ದಾನೆ. ಈತ ಹಲವು ಬಾರಿ ತನ್ನ ತಂದೆಯ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾನೆ.
“ಕುಮಾರ್ ಬೇಡಿಕೆಗಳನ್ನು ಮುಂದುವರಿಸಿದಾಗ, ಸಂತ್ರಸ್ತೆ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದರು. ಆರೋಪಿ ಮೋಹನ್ ಕುಮಾರ್ ನನ್ನು ಬಂಧಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾತನಾಡಿ, ಇದೊಂದು ಪೂರ್ವಯೋಜಿತ ಅಪರಾಧವಾಗಿದ್ದು, ಆರೋಪಿಗಳು ₹ 2.57 ಕೋಟಿ ಸುಲಿಗೆ ಮಾಡಿದ್ದು, ₹ 80 ಲಕ್ಷ ವಶಪಡಿಸಿಕೊಳ್ಳಲಾಗಿದೆ” ಎಂದರು.